ಜಿಲ್ಲೆ

ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಮಾಡಿ, ರಾಜ್ಯ ಸರ್ಕಾರಕ್ಕೆ ಸಂಸದ ಬಚ್ಚೇಗೌಡ ಒತ್ತಾಯ

ವಿಜಯಪುರ: ಲಾಕ್‌ಡೌನ್‌ನಿಂದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗುತ್ತಿಲ್ಲ. ಹವಾಮಾನ ವೈಪರೀತ್ಯದಿಂದ ಕೃಷಿಯಲ್ಲಿ ನಷ್ಟ ಅನುಭವಿಸಿರುವ ರೈತರ ಸಾಲ ಮನ್ನಾ ಮಾಡುವ ಜತೆಗೆ, ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಸಂಸದ ಬಿ.ಎನ್.ಬಚ್ಚೇಗೌಡ ಒತ್ತಾಯಿಸಿದ್ದಾರೆ.

ವಿಜಯಪುರ ಹೋಬಳಿಯ ವೆಂಕಟಗಿರಿಕೋಟೆಯಲ್ಲಿ ದ್ರಾಕ್ಷಿ ಬೆಳೆ ನಷ್ಟವಾಗಿರುವ ರೈತ ದೇವರಾಜಪ್ಪ ಎಂಬುವರ ತೋಟಕ್ಕೆ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ರೈತನಿಂದ ಮನವಿ ಸ್ವೀಕರಿಸಿ ಮಾತನಾಡಿದರು.

ಲಾಕ್‌ಡೌನ್ ಪರಿಣಾಮ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆದ ಹೂವು ಹಾಗೂ ದ್ರಾಕ್ಷಿ ಬೆಳೆಗಳು ಸಂಪೂರ್ಣ ಹಾಳಾಗಿ, ಮಾರುಕಟ್ಟೆಯಿಲ್ಲದೇ ನಷ್ಟ ಅನುಭವಿಸಿರುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟ್ಯಾಕ್ಸಿ ಚಾಲಕರಿಗೆ ನೀಡಿದ ಪ್ಯಾಕೇಜ್‌ನಂತೆ ರೈತರಿಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದರು.

ರೈತ ದೇವರಾಜಪ್ಪ ಒಂದೂಕಾಲು ಎಕರೆ ಪ್ರದೇಶದಲ್ಲಿ ಬೆಳೆದಿರುವ ದ್ರಾಕ್ಷಿಗೆ ಮಾರುಕಟ್ಟೆಯಿಲ್ಲದೇ ಲಕ್ಷಾಂತರ ರೂ. ನಷ್ಟವಾಗಿದ್ದು, ತೋಟಗಾರಿಕಾ ಇಲಾಖೆ ಅಂದಾಜು ಮಾಡಿದಂತೆ 11 ಲಕ್ಷ ಹಾನಿ ಸಂಭವಿಸಿದ್ದರೆ, ಪರಿಹಾರವಾಗಿ 9000 ರೂ. ನೀಡಿರುವುದು ಊಟವಿಲ್ಲದವನಿಗೆ ಉಪ್ಪಿನಕಾಯಿ ನೀಡಿದಂತಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಎಚ್.ಎನ್.ವ್ಯಾಲಿ ನೀರು ಹರಿಸಿ: ಸುಮಾರು ದಿನಗಳಿಂದ ಹೆಬ್ಬಾಳ-ನಾಗವಾರದ ಸಂಸ್ಕರಿಸಿದ ನೀರು ಬೆಟ್ಟಕೋಟೆ ಹಾಗೂ ವೆಂಕಟಗಿರಿಕೋಟೆ ಕೆರೆಗಳಿಗೆ ಹರಿಯದ ಬಗ್ಗೆ ರೈತರು ಗಮನಕ್ಕೆ ತಂದಾಗ, ಸಚಿವರು ಸಂಬಂಧಿಸಿದ ಇಂಜಿನಿಯರ್‌ಗೆ ದೂರವಾಣಿ ಕರೆ ಮಾಡಿ ವಿಚಾರಿಸಿ, ತಾಂತ್ರಿಕ ತೊಂದರೆಯಿಂದ ನೀರು ನಿಲುಗಡೆಯಾಗಿದ್ದು, ಸೋಮವಾರದಿಂದ ಕೆರೆಗಳಿಗೆ ನೀರು ಹರಿಸುತ್ತಾರೆ ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಮುನಿಯಪ್ಪ, ದೊಡ್ಡಬಳ್ಳಾಪುರ ಎಪಿಎಂಸಿ ನಿರ್ದೇಶಕ ಸುಧಾಕರ್, ಎಂಪಿಸಿಎಸ್ ಮಾಜಿ ಅಧ್ಯಕ್ಷ ಲೋಕೇಶ್, ಮುಖಂಡ ರಾಜಶೇಖರಗೌಡ ಮತ್ತಿತರರು ಇದ್ದರು.