Oplus_16908288 
ಜಿಲ್ಲೆ

ದ್ರವ ತ್ಯಾಜ್ಯ ವೈಜ್ಞಾನಿಕ ಸಂಸ್ಕರಣೆ

ಹರಪನಹಳ್ಳಿ: ನರೇಗಾ ಯೋಜನೆಯಡಿ ಬೂದು ನೀರು ನಿರ್ವಹಣೆ ಕಾಮಗಾರಿ 2.0 ಮತ್ತೆ ಆರಂಭಿಸಲಾಗಿದೆ ಎಂದು ತಾ.ಪಂ ಇಒ ವೈ.ಎಚ್.ಚಂದ್ರಶೇಖರ್ ಹೇಳಿದರು.

ಕಂಚಿಕೆರೆ ಗ್ರಾಪಂನಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿ ಕುರಿತು ಸರ್ವೇ ಕಾರ್ಯಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಮೊದಲ ಹಂತದಲ್ಲಿ ಚಿಗಟೇರಿ ಹಾಗೂ ಹಲುವಾಗಲು ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು, ಅವು ಈಗ ಪ್ರಗತಿ ಹಂತದಲ್ಲಿವೆ. ಎರಡನೇ ಹಂತದಲ್ಲಿ ಗುಂಡಗತ್ತಿ ಹಾಗೂ ಕಂಚಿಕೆರೆ ಗ್ರಾಮ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಆರಂಭದಲ್ಲಿ ವಿಸ್ತೃತ ಯೋಜನೆ ತಯಾರಿಕೆಗಾಗಿ ಮನೆ ಮನೆ ಸರ್ವೇ ನಡೆಸಿ ಗ್ರಾಮದ ಸುತ್ತಲೂ ಚರಂಡಿಗಳಿಂದ ಹರಿಯುವ ಬೂದು ನೀರನ್ನು ಹೊರಗಡೆ ಕಳುಹಿಸುವಾಗ ಸ್ವಚ್ಛಗೊಳಿಸಿ ಕೆರೆ, ನದಿ ಸೇರಿದಂತೆ ಇತರ ಜಲ ಸಂಗ್ರಹಣಾ ಸ್ಥಳಗಳಿಗೆ ಹರಿಯಲು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಬೂದು ನೀರು ಉತ್ಪಾದನೆಯಾಗುವ ಮನೆಗಳಿಂದ ಜಲಮೂಲ ಸೇರುವವರೆಗೆ ಸಿಸಿ ಚರಂಡಿ, ಸೆಟ್ಲರ್ ಟ್ಯಾಂಕ್, ವೆಟ್ ಲ್ಯಾಂಡ್, ಬಚ್ಚಲು ಗುಂಡಿ, ಸಮುದಾಯ ಇಂಗು ಗುಂಡಿ ಸೇರಿದಂತೆ ಇತರ ಘಟಕಗಳನ್ನು ನಿರ್ಮಿಸಲಾಗುತ್ತದೆ. ದ್ರವ ತ್ಯಾಜ್ಯವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಮಾದರಿಯಲ್ಲಿ ಸಂಸ್ಕರಿಸಲು ಕಾಮಗಾರಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಗ್ರಾಮಗಳು ನೈರ್ಮಲ್ಯಗೊಂಡು ರೋಗಗಳು ಸಹ ದೂರವಾಗಲಿವೆ ಎಂದು ತಾಪಂ ಇಒ ತಿಳಿಸಿದರು.

ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ್ ಯು.ಎಚ್.ಮಾತನಾಡಿ ಬೂದು ನೀರು ನಿರ್ವಹಣೆ ಕಾಮಗಾರಿಯಿಂದ ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ, ಪರಿಸರ ಹಾಗೂ ಉತ್ತಮ ಸಮಾಜ ನಿರ್ಮಾಣಗೊಳ್ಳಲಿದೆ. ಈ ಹಿಂದೆ ಜನರು ಬಚ್ಚಲು, ಬಟ್ಟೆ ಹಾಗೂ ಪಾತ್ರೆಗಳನ್ನು ತೊಳೆದ ನೀರನ್ನು ಚರಂಡಿಗೆ ಬಿಡುತ್ತಿದ್ದರು. ಇದರಿಂದ ಚರಂಡಿಗಳು ತುಂಬಿ ರೋಗಗಳ ತಾಣವಾಗುತ್ತಿತ್ತು. ನಂತರ ಬೂದು ನೀರು ನದಿ ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತಿತ್ತು. ನರೇಗಾದಡಿ ನೈರ್ಮಲ್ಯ ಕಾಪಾಡುವ ಹಾಗೂ ಜನರ ಜೀವನ ಮಟ್ಟ ಸುಧಾರಿಸುವ ಉದ್ದೇಶದಿಂದ ಪ್ರತಿ ಗ್ರಾಪಂನಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ನೀರಿನ ವೈಜ್ಞಾನಿಕ ನಿರ್ವಹಣೆ ಮಾಡುವ ಉದ್ದೇಶದಿಂದ ಬೂದು ನೀರು ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಕಂಚಿಕೆರೆ ಗ್ರಾಪಂ ಅಧ್ಯಕ್ಷೆ ನೀಲಮ್ಮ, ದಿಶಾ ಕಮಿಟಿ ಸದಸ್ಯ ರೆಡ್ಡಿ ಶಾಂತಕುಮಾರ್, ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು ಇತರರಿದ್ದರು.