ಜಿಲ್ಲೆ

ದೌರ್ಜನ್ಯಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ

ಚಿಕ್ಕಬಳ್ಳಾಪುರ: ಮಹಿಳಾ ಮತ್ತು ಮಕ್ಕಳ ದೌರ್ಜನ್ಯಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಕರೆ ನೀಡಿದರು.

ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಪಾತ್ರದ ಕುರಿತು ಜಿಲ್ಲಾಡಳಿತ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಶನಿವಾರ ಏರ್ಪಡಿಸಿದ್ದ

ಕಾರ್ಯಾಗಾರದಲ್ಲಿ ಮಾತನಾಡಿದರು.

ಕಠಿಣ ಕಾನೂನುಗಳ ಜಾರಿಯ ನಡುವೆಯೂ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಲೈಂಗಿಕ ಕಿರುಕುಳ, ಅತ್ಯಾಚಾರ, ವರದಕ್ಷಿಣೆ ಸೇರಿ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಶೋಷಣೆಗೊಳಗಾಗುವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಕಡಿವಾಣ ಹಾಕುವಲ್ಲಿ ಪ್ರತಿಯೊಬ್ಬರ ಸಹಕಾರ ಅತಗತ್ಯ ಎಂದರು.

ಹೆಣ್ಣು ಮತ್ತು ಗಂಡು ಇಬ್ಬರು ಸಮಾನರು. ಯಾರೊಬ್ಬರೂ ಮೇಲು-ಕೀಳಲ್ಲ. ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು, ಇನ್ನಷ್ಟು ಪ್ರೋತ್ಸಾಹ ಅಗತ್ಯ ಎಂದರು.

ಹಿಂಜರಿಗೆ ಬೇಡ: ಬಾಲ್ಯವಿವಾಹ, ದೌರ್ಜನ್ಯ ಪ್ರಕರಣ ಗಮನಕ್ಕೆ ಬಂದರೆ ಜನರು ಸಂಬಂಧಪಟ್ಟ ಇಲಾಖೆಗೆ ದೂರು ನೀಡಬೇಕು ಎಂದು ಮನವಿ ಮಾಡಿದ ಪ್ರಮೀಳಾ ನಾಯ್ಡು, ಸಂತ್ರಸ್ಥರು ಸಹ ಧೈರ್ಯದಿಂದ ನ್ಯಾಯ ಪಡೆಯಬೇಕು. ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಎಂದು ಸ್ಥೈರ್ಯ ತುಂಬಿದರು.

ವಿಷಯ ಮಂಡನೆ: ಸಂಪನ್ಮೂಲಕ ವ್ಯಕ್ತಿಗಳಾದ ಕಾನೂನು ಪರಿವೀಕ್ಷಣಾಧಿಕಾರಿ ಕೆ.ಎನ್ ಮಂಜುನಾಥ್ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೌತಾಜ್ ಕೌಟುಂಬಿಕ ದೌರ್ಜನ್ಯದಿಂದ ಮಹಿಳಾ ಸಂರಕ್ಷಣಾ ಕಾಯ್ದೆ, ಕಾನೂನು ಪರಿವೀಕ್ಷಣಾಧಿಕಾರಿ ಡಿ.ಕೆ.ರಾಮೇಗೌಡ ಬಾಲ ನ್ಯಾಯ ಕಾಯ್ದೆ ಮತ್ತು ಪೋಕ್ಸ್ ಕಾಯ್ದೆ ವಿಚಾರವಾಗಿ ವಿಷಯ ಮಂಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಡಿವೈಎಸ್ಪಿ ಪ್ರಭುಶಂಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎನ್.ನಾರಾಯಣಸ್ವಾಮಿ ಮತ್ತಿತರರು ಇದ್ದರು.