ಹಾವೇರಿ: ಮಹಿಳಾ ಆಯೋಗಕ್ಕೆ ಬರುವ ದೂರುಗಳ ತ್ವರಿತ ವಿಲೇವಾರಿಗೆ ಆದ್ಯತೆ ನೀಡಲಾಗಿದೆ. ನೊಂದ ಮಹಿಳೆಯರು ನೇರವಾಗಿ ನನ್ನನ್ನು ಸಂರ್ಪಸಬಹುದು. ದೌರ್ಜನ್ಯ, ಕಿರುಕುಳದಂಥ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಗ್ರಾಪಂವಾರು ಜಾಗೃತಿ ಕಾರ್ಯಕ್ರಮ ಆಯೋಜಿಸಲು ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ 425 ದೂರುಗಳನ್ನು ಸ್ವೀಕರಿಸಿದ್ದೇನೆ. ಹಳೆಯ ದೂರುಗಳ ವಿಲೇವಾರಿಗೆ ಆದ್ಯತೆ ನೀಡಿದ್ದೇನೆ. ಆಯೋಗಕ್ಕೆ ಬರುವ ದೂರುಗಳಲ್ಲಿ ದಕ್ಷಿಣ ಕರ್ನಾಟಕ ಭಾಗದ ದೂರುಗಳು ಹೆಚ್ಚಾಗಿವೆ ಎಂದರು.
ಸಮಾಜದ ಕಟ್ಟಕಡೆಯ ಮಹಿಳೆಗೂ ನ್ಯಾಯ ಒದಗಿಸಬೇಕು. ಆಯೋಗಕ್ಕೆ ಮತ್ತಷ್ಟು ಸ್ವತಂತ್ರ ತೀರ್ಮಾನ ಕೈಗೊಳ್ಳುವ ಅಧಿಕಾರದ ಅವಶ್ಯಕತೆಯಿದೆ. ಇದಕ್ಕಾಗಿ ಮನವಿ ಮಾಡಿಕೊಳ್ಳಲಾಗುವುದು. ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಜೊತೆಗೆ ಕಾನೂನಿನ ನೆರವು ದೊರಕಿಸಿಕೊಡುವ ನಿಟ್ಟಿನಲ್ಲಿ ಪೊಲೀಸ್ ಸೇರಿ ವಿವಿಧ ಇಲಾಖೆಗಳು ಸಮನ್ವಯದಿಂದ ಉತ್ತಮ ಕಾರ್ಯಕೈಗೊಳ್ಳಬೇಕು. ಆಸಿಡ್ ದಾಳಿಗೆ ಒಳಗಾದ ಜಿಲ್ಲೆಯ ಮಹಿಳೆಯೊಬ್ಬರ ದೂರು ಸ್ವೀಕರಿಸಲಾಗಿದೆ. ಈ ಮಹಿಳೆಗೆ ತ್ವರಿತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಈ ಸಭೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಕರ್ಯ ಕಲ್ಪಿಸುವುದು, ದೇವದಾಸಿ ಮಹಿಳೆಯರಿಗೆ ನಿವೇಶನ, ವಸತಿ ಸೌಕರ್ಯ, ಉದ್ಯೋಗಾವಕಾಶ, ಮಾಸಾಶನ ತ್ವರಿತವಾಗಿ ಕಲ್ಪಿಸಲು ಸೂಚಿಸಿದ್ದೇನೆ ಎಂದರು.
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರು ಲೈಂಗಿಕ ದೌರ್ಜನ್ಯ ಇತರ ದುಶ್ಚಟಗಳಿಗೆ ಒಳಗಾಗುವ ಘಟನೆಗಳು ನಡೆಯುತ್ತಿವೆ. ಇದರೊಂದಿಗೆ ಹಿರಿಯ ನಾಗರಿಕರಿಗೆ ಕಿರುಕುಳ, ಮಹಿಳೆಯರ ಮೇಲೆ ವರದಕ್ಷಿಣೆ, ಲೈಂಗಿಕ ಕಿರುಕುಳ, ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆ ಇತರ ಇಲಾಖೆಯ ಸಹಯೋಗದಲ್ಲಿ ಘಟನೆಗಳ ತಡೆಯುವ ನಿಟ್ಟಿನಲ್ಲಿ ಯುವಕ, ಯುವತಿಯರಿಗೆ ತಿಳುವಳಿಕೆ ನೀಡುವುದು, ಕೌನ್ಸೆಲಿಂಗ್ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ತಿಳಿಸಿದ್ದೇನೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಖಿ ಒನ್ ಸೆಂಟರ್, ಸಾಂತ್ವನ, ಸ್ವಾಧಾರ, ಸ್ಪಂದನ ದತ್ತು ಕೇಂದ್ರಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ. ಕೆಲವು ನ್ಯೂನತೆಗಳು ಕಂಡುಬಂದಿದ್ದು, ಸರಿಪಡಿಸಿಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.
ಆಯಾ ಪ್ರಾದೇಶಿಕ ಆಹಾರ ಪದ್ಧತಿಗೆ ಅನುಸಾರವಾಗಿ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರಕ್ಕೆ ಅನುಕೂಲಗುವಂತೆ ಕೇಂದ್ರೀಕೃತ ವ್ಯವಸ್ಥೆ ಬದಲಿಸುವುದು ಉತ್ತಮ. ಆಹಾರದ ಟೆಂಡರ್ನ್ನು ಸ್ಥಳೀಯ ಎಂಎಸ್ಪಿಸಿ ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ಖರೀದಿಗೆ ಜಿಲ್ಲಾಧಿಕಾರಿಗೆ ಅಧಿಕಾರ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಮತ್ತು ಸಿಎಂ ಭೇಟಿ ಮಾಡಿ ರ್ಚಚಿಸಿ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟಪ್ಪನವರ ಸುದ್ದಿಗೋಷ್ಠಿಯಲ್ಲಿದ್ದರು.