ಜಿಲ್ಲೆ

ದೌರ್ಜನ್ಯ ನಡೆಯದಂತೆ ನೋಡಿಕೊಳ್ಳೋಣ

Bidar

ಬೀದರ್: ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ರಾಮಚಂದ್ರನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಜರುಗಿತು.

ನ್ಯಾಯಾಲದಲ್ಲಿನ ಪ್ರಕರಣ, ಪೊಲೀಸ್ ವಿಚಾರಣೆಯಲ್ಲಿರುವ ಪ್ರಕರಣ, ಕಳೆದ 10 ತಿಂಗಳಲ್ಲಿ ಸಂತ್ರಸ್ತರಿಗೆ ಪರಿಹಾರಧನ ವಿತರಿಸಿದ ವಿವರ ಮತ್ತು ಪರಿಹಾರ ಧನಕ್ಕಾಗಿ ಬಾಕಿ ಉಳಿದ ಪ್ರಕರಣಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

2016 ರಿಂದ 2020ರವರೆಗೆ ಎಲ್ಲ ದೌರ್ಜನ್ಯ ಪ್ರಕರಣಗಳಲ್ಲಿ ಎರಡನೇ ಕಂತಿನ ಪರಿಹಾರ ಧನ ವಿತರಿಸಲಾಗಿದೆ. ಕಳೆದ 10 ತಿಂಗಳಲ್ಲಿ ಬೀದರ್ ತಾಲೂಕಿನಲ್ಲಿ 3, ಹುಮನಾಬಾದ್, ಬಸವಕಲ್ಯಾಣ, ಚಿಟಗುಪ್ಪ ತಾಲೂಕುಗಳಲ್ಲಿ ತಲಾ ಒಂದು ಸೇರಿ ಒಟ್ಟು 6 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ. ಬಸವಕಲ್ಯಾಣ 2, ಬೀದರ್ 3 ಹಾಗೂ ಭಾಲ್ಕಿ, ಹುಮನಾಬಾದ್ ಮತ್ತು ಚಿಟಗುಪ್ಪ ತಾಲೂಕುಗಳಲ್ಲಿ ತಲಾ ಒಂದು ಪ್ರಕರಣಗಳು ಪೊಲೀಸ್ ವಿಚಾರಣೆ ಹಂತದಲ್ಲಿವೆ ಎಂದು ಸಮಿತಿ ಸದಸ್ಯ ಕಾರ್ಯದರ್ಶಿ ಸಭೆಗೆ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಡಿಸಿ ರಾಮಚಂದ್ರನ್, ದೌರ್ಜನ್ಯ ಘಟನೆ ಸಂಭವಿಸಿದ ಕೂಡಲೇ ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಬೇಕು. ಪ್ರಕರಣ ದಾಖಲಿಸಿದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿಯನ್ನು ತುರ್ತಾಗಿ ರವಾನಿಸಲು ಕ್ರಮ ವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಸಂತ್ರಸ್ತರಿಗೆ ಪರಿಹಾರ ದೊರಕಿಸುವ ಬಗ್ಗೆ ಚರ್ಚಿಸುವುದಷ್ಟೇ ಸಮಿತಿ ಕಾರ್ಯವಲ್ಲ. ಬದಲಾಗಿ ದೌರ್ಜನ್ಯ ಪ್ರಕರಣಗಳು ಸಂಭವಿಸದಂತೆ ನೋಡಿಕೊಳ್ಳುವುದು, ಎಲ್ಲರೂ ಸಹಬಾಳ್ವೆಯಿಂದ ಬದುಕುವಂತೆ ಜನಜಾಗೃತಿ ಮೂಡಿಸುವ ಕೆಲಸ ಸಮಿತಿ ಮಾಡಬೇಕಿದೆ. ಹೀಗಾಗಿ ಸಮಿತಿಯ ಸದಸ್ಯರು ನೀಡುವ ಸಲಹೆ ಸೂಚನೆ ಪಾಲನೆ ಮತ್ತು ಸಮಿತಿಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಕೂಡಲೇ ಅನುಷ್ಠಾನವಾಗುವಂತೆ ನೋಡಿಕೊಳ್ಳಲು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಮತ್ತು ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ಒತ್ತು ಕೊಡಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಎಸ್ಪಿ ನಾಗೇಶ, ಹೆಚ್ಚುವರಿ ಎಸ್ಪಿ ಡಾ. ಗೋಪಾಲ ಬ್ಯಾಕೋಡ್, ಬಸವಕಲ್ಯಾಣ ಎಸಿ ಭುವನೇಶ ಪಾಟೀಲ್, ಸಮಿತಿ ಸದಸ್ಯರಾದ ಎಸ್.ಎಂ.ಜನವಾಡಕರ್, ಶಂಕರರಾವ ಸಿಂಧೆ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಎಂಎಲ್ಸಿ ಅರಳಿ ಅಸಮಾಧಾನ
ಕೆಲ ಅಧಿಕಾರಿಗಳ ನಿಷ್ಕಾಳಜಿಯಿಂದ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆ ಕಾಲಕಾಲಕ್ಕೆ ನಡೆಯುತ್ತಿಲ್ಲ ಹಾಗೂ ದೌರ್ಜನ್ಯ ಪ್ರಕರಣಗಳಲ್ಲಿ ಸರ್ಕಾರದ ಪರಿಹಾರ ಧನವೂ ನೊಂದವರಿಗೆ ಸಕಾಲಕ್ಕೆ ತಲುಪುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿ, ದೌರ್ಜನ್ಯ ಘಟನೆಗಳ ಸಂತ್ರಸ್ತರಿಗೆ ತುರ್ತಾಗಿ ಪರಿಹಾರ ಧನ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಬಗ್ಗೆ ಸದಸ್ಯರಿಗೆ ಸಾಕಷ್ಟು ಮುಂಚಿತ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.