ಬಾಗಲಕೋಟೆ ನಗರದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ‍್ಯಾಲಿ. 
ಜಿಲ್ಲೆ

ದೋಸ್ತಿಗಳ ವಿರುದ್ಧ ಕೈ ನಾಯಕರ ಗುಡುಗು

ಬಾಗಲಕೋಟೆ: ಮುಡಾ, ವಾಲ್ಮೀಕಿ ನಿಗಮದ ಹಗರಣದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷವು ಸಿಎಂ ಸಿದ್ದರಾಮಯ್ಯ ಅವರ ತೆಜೋವಧೆ ಮುಂದಾಗಿವೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ಕೋಟೆನಗರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಡಾ.ಬಿ.ಆರ್.ಅಂಬೇಡ್ಕರ ವೃತ್ತ ವೃತ್ತದಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿ ವೆಂಕಟಪೇಟ, ವಲ್ಲಭಾಯಿ ಚೌಕ್, ಎಂ.ಜಿ.ರಸ್ತೆ ಬಸವೇಶ್ವರ ವೃತ್ತ ತಲುಪಿತು. ಬಿಜೆಪಿ-ಜೆಡಿಎಸ್ ಪ್ರತಿಕೃತಿ ದಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೈ ಕಾರ್ಯಕರ್ತರು ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಸಿಎಂ ಸಿದ್ದರಾಮಯ್ಯ ಜನಪರ ಕೆಲಸ ಮಾಡುತ್ತಿದ್ದಾತೆ. ಜಾತಿ, ಮತ, ಪಂಥ ಮಾಡಲಿಲ್ಲ. ಸರ್ಕಾರದ ಕಾರ್ಯಕ್ರಮ ಪ್ರತಿಯೊಬ್ಬರಿಗೆ ತಲುಪುವಂತೆ ಮಾಡಿದದ್ದಾರೆ. ವಿರೋಧ ಪಕ್ಷಗಳಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಎರಡನೇ ಬಾರಿ ಸಿಎಂ ಆಗಿದ್ದಕ್ಕೆ ಹೊಟ್ಟೆ ಉರಿ ಶುರುವಾಗಿದೆ. ಸಿದ್ದರಾಮಯ್ಯ ಪತ್ನಿ ರಾಜಕಾರಣದತ್ತ ಕಣ್ಣು ಹಾಯಿಸದ ತಾಯಿ. ಸರ್ಕಾರದ ನಿಯಮಾನುಸಾರ ಮುಡಾದಲ್ಲಿ ನಿವೇಶನ ಪಡೆದುಕೊಂಡಿದ್ದಾರೆ. ಇದೀಗ ದುರುದ್ದೇಶದಿಂದ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳೆಯಲು ಹೊರಟಿಸಿದ್ದಾರೆ. ಸಿದ್ದರಾಮಯ್ಯ ಟಚ್ ಮಾಡಿದರೇ ದೇಶವೇ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಾವಿರಾರು ಕೋಟಿ ರೂ. ಹಗರಣ ಆಗಿದೆ. ಅಲ್ಲದೆ ಭೋವಿ ನಿಗಮ, ಬಿಟ್ ಕ್ವಾಯಿನ್ ಹಗರಣ ಆದಾಗ ರಾಜ್ಯಪಾಲರು ನೋಟಿಸ್ ನೀಡಲಿಲ್ಲ. ಮುಡಾದಲ್ಲಿ ಯಾವುದೇ ನಿಯಮ ಬಾಹಿರ ಇಲ್ಲದೇ ಇದ್ದಾಗಲು ಸಿಎಂ ಸಿದ್ದರಾಮಯ್ಯ ಮೇಲೆ ಆರೋಪ ಹೊರಿಸುವುದು ತರವಲ್ಲ. ಸಾವಿರಾರು ಕೋಟಿ ರೂ. ಹಗರಣ ನಡೆದಾಗಲು ರಾಜ್ಯಪಾಲರು ಸುಮ್ಮನಿದ್ದರು. ಇದೀಗ ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಮುಡಾದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ನಿವೇಶನ ಪಡೆದುಕೊಂಡಿದ್ದಾರೆ. ಇಂತಹ ಹಗರಣ ಮುಚ್ಚಿಹಾಕಲು ಪಾದಯಾತ್ರೆಯ ನಾಟಕ ಮಾಡುತ್ತಿದ್ದಾರೆ. ಅಂಬೇಡ್ಕರ ಆಶಯ ಜಾರಿಗೆ ತರಲು ಹೊರಟಿರುವ ಸಿದ್ದರಾಮಯ್ಯಗೆ ಧಕ್ಕೆ ತಂದರೇ ನಿಮಗೆ ಉಳಿಗಾಲವಿಲ್ಲ ಎಂದು ಹೇಳಿದರು.

ದೋಸ್ತಿ ಪಕ್ಷಗಳ ಪಾದಯಾತ್ರೆ ವಿರುದ್ಧ ಗುಡುಗಿದ ಶಾಸಕ ವಿಜಯಾನಂದ ಕಾಶಪ್ಪನವರ, ನಿಮ್ಮ ವರ್ತನೆ ಹೀಗೆ ನಡೆದರೆ ನಾವು ಬಾಗಲಕೋಟೆಯಿಂದ ದೆಹಲಿ ವರೆಗೂ ಪಾದಯಾತ್ರೆ ಮಾಡುತ್ತಿದ್ದೇವೆ. ಬಿಜೆಪಿ ಪಾದಯಾತ್ರೆಯನ್ನು ಭ್ರಷ್ಟಾಚಾರಿ, ಹೇಡಿಗಳ ಪಾದಯಾತ್ರೆ. ನಮಗೆ(ಕಾಂಗ್ರೆಸ್) ಪಾದಯಾತ್ರೆ ಹೊಸದಲ್ಲ. ನಮ್ಮ ಸಿದ್ದರಾಮಯ್ಯ ಸೆಡ್ಡು ಹೊಡೆದು ಪಾದಯಾತ್ರೆ ಮಾಡಿದರು. ರಾತ್ರೋ ರಾತ್ರಿ ಯಾವನೋ ಒಬ್ಬ ತಲೆಹಿಡುಕ ವ್ಯಕ್ತಿ ರಾಜ್ಯಪಾಲರಿಗೆ ಮನವಿ ಕೊಟ್ರೆ. ರಾಜ್ಯಪಾಲರು ರಾತ್ರಿ ೧೧ ಕ್ಕೆ ನೋಟಿಸ್ ಕೊಡ್ತಾರೆ. ಅಂದರೇ ಇವರಿಗೆ(ಬಿಜೆಪಿ) ಎಷ್ಟು ಅಂಜಿಕೆ ಅಂತ. ಇವರು ಏನೇ ತಿಪ್ಪರಲಾಗ ಹೊಡೆದು, ಲಗಾಟ ಹೊಡೆದ್ರು ಇವರಿಗೆ ನಮ್ಮದೇನು ಮಾಡಕ್ಕೆ ಆಗಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪೆನ್ ಡೈವ್ ಹಗರಣ ಇಂದಿಗೂ ಜನ ಮರೆತಿಲ್ಲ. ೩೬ ಸಾವಿರ ಚದುರ ಅಡಿ ಕುಮಾರಸ್ವಾಮಿ ಮುಡಾದಲ್ಲಿ ನಿವೇಶನ ಪಡೆದುಕೊಂಡಿದ್ದಾರೆ. ಸಂಬಂಧವಿಲ್ಲದ ಮೈಸೂರಿನಲ್ಲಿ ಆಸ್ತಿ ಮಾಡಿದ್ದಾರೆ. ಬಾಗಲಕೋಟೆಯಲ್ಲಿಯೂ ಅವರ ಆಸ್ತಿ ಇರಬಹುದು. ಅವರಷ್ಟು ಅಕ್ರಮ ಆಸ್ತಿ ಯಾರು ಮಾಡಿಲ್ಲ ಎಂದು ಆರೋಪಿಸಿದ ಅವರು, ಈ ಪ್ರತಿಭಟನೆ ಕೇವಲ ಅಹಿಂದ ಮಾತ್ರ ಸಿಮೀತವಲ್ಲ. ಸಿದ್ದರಾಮಯ್ಯ ಎಲ್ಲ ವರ್ಗದವರಿಗೂ ಸಂಬಂಧಪಟ್ಟ ವ್ಯಕ್ತಿ. ಕೇವಲ ಅಹಿಂದಕ್ಕೆ ಸಿಮೀತಗೊಳಿಸಬೇಡಿ ಅಂತ ಸಂಘಟಕಾರರಿಗೆ ಪರೋಕ್ಷವಾಗಿ ಕಿವಿ ಹಿಂಡಿದರು.

ಶಾಸಕರಾದ ಬಿ.ಬಿ.ಚಿಮ್ಮನಕಟ್ಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಜಿ.ಪಂ ಮಾಜಿ ಅಧ್ಯಕ್ಷರಾದ ವೀಣಾ ಕಾಶಪ್ಪನವರ, ಬಾಯಕ್ಕ ಮೇಟಿ, ಮುಖಡಂಡರಾದ ಹೊಳಬಸ್ಸು ಶೆಟ್ಟರ, ನಾಗರಾಜ ಹದ್ಲಿ, ಬಸವಪ್ರಭು ಸರನಾಡಗೌಡ, ದ್ಯಾಮಣ್ಣ ಗಾಳಿ, ರಾಜು ಮನ್ನಿಕೇರಿ, ಸಂತೋಷ ಹೊಕ್ರಾಣಿ, ಚಂದ್ರಶೇಖರ ರಾಠೋಡ, ಮುತ್ತು ಜೋಳದ, ಪರಶುರಾಮ ಮಹಾರಾಜನವರ ಇತರರು ಇದ್ದರು.