????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಿ

ಹನೂರು: ನಿಖರವಾದ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಪಾತ್ರ ಅತೀ ಮುಖ್ಯ. ಹಾಗಾಗಿ ಪ್ರತಿಯೊಬ್ಬರೂ ಈ ಬಗ್ಗೆ ಮುತುರ್ವಜಿ ವಹಿಸಬೇಕು ಎಂದು ತಹಸೀಲ್ದಾರ್ ಕೆ.ಎನ್ ಚೈತ್ರಾ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಮತದಾರರ ಪಟ್ಟಿ ಸಿದ್ಧಪಡಿಸುವ ಸಂಬಂಧ ವಿಶೇಷ ಸಮಗ್ರ ಪರಿಷ್ಕರಣೆ -2025 ಕುರಿತು ಬಿಎಲ್‌ಒಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಪ್ರಜಾಪ್ರಭುತ್ವ ಮಹತ್ವದ ಪಾತ್ರವನ್ನು ವಹಿಸಿದೆ. ಹಾಗೆಯೇ ಪ್ರಜಾಪ್ರಭುತ್ವವನ್ನು ಬಲಗೊಳಿಸುವಲ್ಲಿ ಚುನಾವಣೆ ಮುಖ್ಯ ಪಾತ್ರವಹಿಸಿದೆ. ಯಶಸ್ವಿ ಚುನಾವಣೆ ದೋಷರಹಿತ, ನಿಖರವಾದ ಮತದಾರರ ಪಟ್ಟಿಯನ್ನು ಅವಲಂಬಿಸಿದೆ. ಆದ್ದರಿಂದ ನಿಖರ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ತಮ್ಮೆಲ್ಲರ ಶ್ರಮ ಅಪಾರ ಎಂದರು.

ಈಗಾಗಲೇ ಮತದಾರರ ಪಟ್ಟಿ ಸಿದ್ಧಪಡಿಸುವ ಸಂಬಂಧ ತರಬೇತಿ ನೀಡಲಾಗಿದೆ. ಇದೀಗ ಸಮಗ್ರವಾಗಿ ಪರಿಷ್ಕರಣೆಯ ಉದ್ದೇಶದಿಂದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಈ ಬಗ್ಗೆ ಚೆನ್ನಾಗಿ ಅರ್ಥೈಸಿಕೊಳ್ಳಬೇಕು. ಒಂದು ವೇಳೆ ಸಮಸ್ಯೆ ಇದ್ದಲ್ಲಿ ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಬೇಕು. ಮನೆ ಮನೆಗೆ ತೆರಳಿ ಅರ್ಹರಿಂದ ದಾಖಲೆ ಪಡೆದು ಸಮಗ್ರ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಈ ಕೆಲಸ ಶೀಘ್ರವಾಗಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು. ಅನರ್ಹರಿದ್ದಲ್ಲಿ ಪಟ್ಟಿಯಿಂದ ತಿರಸ್ಕೃತಗೊಳಿಸಬೇಕು. ಒಟ್ಟಿನಲ್ಲಿ ದೋಷರಹಿತ ಮತದಾರರ ಪಟ್ಟಿ ಸಿದ್ಧವಾಗಬೇಕು ಎಂದು ತಿಳಿಸಿದರು.

ಬಳಿಕ ಬಿಎಲ್‌ಒಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ತರಬೇತಿ ನೀಡಲಾಯಿತು. ಈ ವೇಳೆ ಗೊಂದಲಗಳನ್ನು ಪರಿಹರಿಸಲಾಯಿತು. ಉಪ ತಹಸೀಲ್ದಾರ್ ಸುರೇಖಾ, ಗ್ರಾಮ ಆಡಳಿತ ಅಧಿಕಾರಿ ಲೋಕೇಶ್, ಹೇಮಾ, ಸಂಪನ್ಮೂಲ ವ್ಯಕ್ತಿ ವೆಂಕಟರಾಜು ಇದ್ದರು.