ದೋರನಹಳ್ಳಿ: ಫ್ಯೂಸ್, ಲೈನ್ ಫಾಲ್ಟ್ ಆದ್ರೂ ಸರಿಪಡಿಸುವವರಿಲ್ಲ. ವಿದ್ಯುತ್ ಸಮಸ್ಯೆ ಏನೇ ಇದ್ದರೂ ಖಾಸಗಿ ಲೈನ್‌ಮನ್‌ಗಳೇ ಬರಬೇಕು. ಉಚಿತ ವಿದ್ಯುತ್ ಎಂದು ಸರ್ಕಾರ ಹೇಳಿದರೂ ಇಲ್ಲಿ ಕತ್ತಲ ಭಾಗ್ಯವೇ ಖಚಿತ. ವಿದ್ಯುತ್ ಕಂಬಗಳಿಲ್ಲದೆ ಬಂಬೂಗಳೇ ಆಸರೆ. ಕತ್ತಲನ್ನು ಎನ್‌ಕ್ಯಾಶ್ ಮಾಡಿದ ದುರಳರಿಂದ ಕಳ್ಳತನ...
ಯಾದಗಿರಿ ವಿಧಾನಸಭಾ ಮತಕ್ಷೇತ್ರದ ದೊಡ್ಡ ಗ್ರಾಮಗಳಲ್ಲಿ ಒಂದಾದ ದೋರನಹಳ್ಳಿಯ ಕಥೆ-ವ್ಯಥೆ ಇದು. ಸ್ಥಳೀಯವಾಗಿ ೩೫ ಗ್ರಾಮ ಪಂಚಾಯಿತಿ ಸದಸ್ಯರ ಜತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಎಪಿಎಂಸಿ ಸ್ಥಾನ ಹೊಂದಿರುವ ಊರಲ್ಲಿ ೧೨ ಸಾವಿರ ಮತದಾರರು, ೨೦ ಸಾವಿರ ಜನಸಂಖ್ಯೆ ಇದ್ದರೂ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗದೆ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ವಿದ್ಯುತ್ ಇಲ್ಲದ್ದರಿಂದ ಒಂದಲ್ಲ ಎರಡಲ್ಲ ಹತ್ತಾರು ಸಮಸ್ಯೆ ದಿನೇದಿನೆ ಹೆಚ್ಚುತ್ತಿದ್ದರೂ ಯಾವೊಬ್ಬ ಅಧಿಕಾರಿ ಪರಿಹಾರದತ್ತ ಚಿತ್ತ ಹರಿಸುತ್ತಿಲ್ಲ. ಸ್ಥಳೀಯವಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಪ್ರಮುಖ ಮುಖಂಡರಿದ್ದರೂ ಊರ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಿಲ್ಲ.
ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕುಡಿಯುವ ನೀರಿಗೂ ಬರ ಎದುರಾಗಿದೆ. ಇನ್ನು ಖಾಸಗಿ ಶುದ್ಧೀಕರಣ ಘಟಕದಿಂದ ತರಬೇಕು ಎಂದರೆ ವಿದ್ಯುತ್ ಇಲ್ಲದೆ ಜೀವಜಲ ಸಿಗದಂಥ ಸ್ಥಿತಿ ಇದೆ. ಊರಲ್ಲಿ ನಾಡಕಚೇರಿ, ಬ್ಯಾಂಕ್, ಗ್ರಾಮ ಒನ್, ಸಮುದಾಯ ಆರೋಗ್ಯ ಕೇಂದ್ರ, ಸಿಜೇರಿಯನ್ ಸೆಂಟರ್, ವಸತಿ ನಿಲಯವಿದ್ದರೂ ವಿದ್ಯುತ್ ಚೆಲ್ಲಾಟದಿಂದ ಕಾರ್ಯನಿರ್ವಹಣೆ ಕಷ್ಟಸಾಧ್ಯ ಎನಿಸಿದೆ.
ಬಂಬೂಗಳೇ ಕಂಬಗಳು: ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ನಗರದಲ್ಲಿ ೮೦-೯೦ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಟ್ಟಿಗೆಯ ನೀಲಗಿರಿ, ಬಿದಿರು ಬಂಬೂಗಳ ಕಂಬ ಹಾಕಿ ಪಡೆಯಲಾಗಿದೆ. ಇದರಲ್ಲಿ ಒಂದು ಸಂಪರ್ಕ ಕಡಿದರೂ ಅದೆಷ್ಟು ಪ್ರಾಣ ಹೋಗುತ್ತವೆಯೋ ಗೊತ್ತಿಲ್ಲ. ಜೆಸ್ಕಾಂ ಮೀಟರ್ ಅಳವಡಿಸಿರುವ ವಿದ್ಯುತ್ ಕಂಬ ಹಾಕದಿರುವುದು ಸಂಬAಧಿತರ ನಿರ್ಲಕ್ಷÈಕ್ಕೆ ಸಾಕ್ಷಿ.
ಕಾಯಂ ಮಾರ್ಗದಾಳು ಇಲ್ಲ: ದೋರನಹಳ್ಳಿಗೆ ಖಾನಾಪುರ ೧೧೦/೩೩ ಮತ್ತು ೧೧೦/೧೧ ಕೆವಿ ಕೇಂದ್ರದಿAದ ವಿದ್ಯುತ್ ಸರಬರಾಜು ಆಗುತ್ತದೆ. ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಪೂರೈಕೆ ಇದ್ದರೂ ಪ್ರಯೋಜನವಿಲ್ಲ. ದಿನಕ್ಕೆ ಹತ್ತಾರು ಬಾರಿ ಲೈನ್ ಫಾಲ್ಟ್ ನೆಪದಲ್ಲಿ ವಿದ್ಯುತ್ ಕಡಿತಗೊಳ್ಳುತ್ತದೆ. ಒಂದೇ ಪೀಡರ್‌ಗೆ ೯ಕ್ಕೂ ಹೆಚ್ಚು ಹಳ್ಳಿಗಳಿರುವ ಕಾರಣ ಯಾವುದೇ ಊರಲ್ಲಿ ಫಾಲ್ಟ್ ಆದರೂ ಎಲ್ಲ ಹಳ್ಳಿಗಳಲ್ಲಿ ಕತ್ತಲೆ ಆವರಿಸುತ್ತದೆ. ಕಾಯಂ ಮಾರ್ಗದಾಳು ಇಲ್ಲದ್ದರಿಂದ ಸಮಸ್ಯೆಗೆ ಸ್ಪಂದಿಸುವವರು ಇಲ್ಲದಂತಾಗಿದೆ.
ಇನ್ನು ಕತ್ತಲು ಆವರಿಸಿದರೆ ರಾತ್ರಿ ಹೊತ್ತು ದುರುಳರು ಕಳ್ಳತನಕ್ಕೆ ಇಳಿಯುತ್ತಾರೆ. ಮನೆಯಂಗಳದಲ್ಲಿನ ಸೈಕಲ್, ಬೋರ್‌ವೆಲ್ ಮೋಟಾರ್, ಆಕಳು ಹೀಗೆ ಸಣ್ಣಪುಟ್ಟ ಕಳವು ನಡೆದಿದ್ದು, ದೊಡ್ಡ ಪ್ರಮಾಣದ ಪ್ರಕರಣ ನಡೆಯುವ ಮುನ್ನ ಜೆಸ್ಕಾಂ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸುವ ತುರ್ತು ಅಗತ್ಯವಿದೆ.