ಚಿತ್ರದುರ್ಗ: ನಿಡಗಲ್, ಹರತಿ ಪಾಳೇಗಾರರ ಕಾಲದಲ್ಲಿ ಸಾಕಷ್ಟು ಏಳಿಗೆ ಕಂಡಿರುವ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮ, ನೊಳಂಬ ಪಲ್ಲವರ ಆಡಳಿತ ಹಾಗೂ ಸಾಂಸ್ಕೃತಿಕ ಪ್ರಭಾವಕ್ಕೊಳಗಾದ ಐತಿಹಾಸಿಕ ಸ್ಥಳವಾಗಿದ್ದು, ಈಚೆಗೆ ಅಪ್ರಕಟಿತ ಶಾಸನವೊಂದು ಇಲ್ಲಿ ಪತ್ತೆಯಾಗಿದೆ ಎಂದು ಡಾ. ಮಹೇಶ್ ಕುಂಚಿಗನಾಳು ತಿಳಿಸಿದ್ದಾರೆ.
ದೊಡ್ಡೇರಿ ಹಳ್ಳದ ಗುಂಡಿಯಲ್ಲಿದ್ದ ಶಾಸನವನ್ನು ಜಗಳೂರಿನ ನಳಂದ ಕಾಲೇಜಿನ ಇತಿಹಾಸ ಉಪನ್ಯಾಸಕ ರಾಜಣ್ಣ ಗಮನಿಸಿ ತಮ್ಮ ಖಾಲಿ ನಿವೇಶನದಲ್ಲಿ ಸಂರಕ್ಷಿಸಿದ್ದರು. ಇದು ಒಂದು ಕಪ್ಪು ಗ್ರಾನೈಟ್ ಸ್ತಂಭದಲ್ಲಿದೆ. 10ನೇ ಶತಮಾನದ ಲಿಪಿ, ಲಕ್ಷಣಗಳನ್ನು ಹೊಂದಿದ್ದು, ಅಕ್ಷರಗಳು ಸ್ಫುಟವಾಗಿವೆ. ಇದು ದೇವಾಲಯ ಕಂಬವಾಗಿರದೆ ಶಾಸನ ಸ್ತಂಭವೆಂದು ಸ್ಪಷ್ಟವಾಗಿ ಗುರುತಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದರಲ್ಲಿ ಮಂಗಳ ಎಂಬ ಪದವಿದೆ. ಪ್ರಾಚೀನ ಕಾಲದಲ್ಲಿ ಅಗ್ರಹಾರಗಳನ್ನು ಮಂಗಳ ಎಂದು ಕರೆಯಲಾಗುತ್ತಿದ್ದು, ಈ ಶಾಸನ ಮಹತ್ವದ ದಾಖಲೆಯಾಗಲಿದೆ. 10ನೇ ಶತಮಾನದ ಪೂರ್ವದಲ್ಲಿ ದೊಡ್ಡೇರಿಗೆ ಮಂಗಳ ಎಂದು ಕರೆಯುತ್ತಿದ್ದರೆ? ದೊಡ್ಡೇರಿ ಸಮೀಪ ಮಂಗಳ ಎಂಬ ಹೆಸರಿನ ಗ್ರಾಮವಿತ್ತೇ ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕಿದೆ ಎಂದು ಮಹೇಶ್ ತಿಳಿಸಿದ್ದಾರೆ.
ಶಾಸನ ಪಠ್ಯ ಓದಿದ ಶಾಸನ ತಜ್ಞ ಡಾ. ಸ್ಮಿತಾರೆಡ್ಡಿ, ಮಾರ್ಗದರ್ಶನ ನೀಡಿದ ರಮೇಶ್ ಹಿರೇಜಂಬೂರ್, ಡಾ. ಜಗದೀಶ್, ರಾಜಣ್ಣ, ಲಿಂಗರಾಜ್, ನಾಗೇಂದ್ರ ಅವರ ಸಹಕಾರ ಸ್ಮರಿಸಿದ್ದಾರೆ.