ಕೊಳ್ಳೇಗಾಲ: ಕನಕಗಿರಿ ಕೈಲಾಸ, ಮುಡುಕುತೊರೆ ಪರ್ವತ ಎಂದೇ ಪ್ರತೀತಿ ಇರುವಂತೆ ಶ್ರೀಶೈಲಕ್ಕೆ ಹೋಗುವುದಕ್ಕೆ ಸಾಧ್ಯವಾಗದ ಭಕ್ತರು ಪಾರ್ವತಿ-ಪರಮೇಶ್ವರರನ್ನು ಇಲ್ಲಿಯೇ ಇಂದಿಗೂ ಕಾಣುತ್ತಾರೆ…!
ಹೌದು…ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿರುವ ಕನಕಗಿರಿ ಮಲ್ಲಿಕಾರ್ಜುನಸ್ವಾಮಿ, ಪಾರ್ವತಿ ದೇವಿ ಹಾಗೂ ಗುಡ್ಡದ ಮಾರಮ್ಮನ ದೇವಾಲಯ ಈ ಭಾಗದ ಶಕ್ತಿ ದೇವತೆಗಳಾಗಿ ನೆಲೆಸಿದ್ದಾರೆ. ಈ ಎರಡು ದೇವಾಲಯಗಳು ಗುಡ್ಡದ ಮೇಲಿವೆ.
ಈ ದೇವಾಲಯಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಚೋಳರ ಕಾಲದಲ್ಲಿ ಸ್ಥಾಪನೆಗೊಂಡಿವೆ ಎಂದು ಹೇಳಲಾಗುತ್ತದೆ. ಮುಡುಕುತೊರೆ ಹಾಗೂ ಕನಕಗಿರಿ ಅಸುಪಾಸಿನಲ್ಲೇ ಇದ್ದು, ಗುಡ್ಡದ ಮಾರಮ್ಮನ ಒಕ್ಕಲಿಗೆ ಸೇರಿದ ಸಾವಿರಾರು ಮಂದಿ ದೇವರ ಗುಡ್ಡರಿದ್ದಾರೆ. ಅಲ್ಲದೆ ಎಲ್ಲ ಸಮುದಾಯಕ್ಕೆ ಸೇರಿದ ಜನರು ಈ ದೇವರನ್ನು ಆರಾಧಿಸುತ್ತಾರೆ. ಸುತ್ತೇಳು ಗ್ರಾಮಗಳ ಜನರು ದೇವಾಲಯಕ್ಕೆ ಬಂದು ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.
ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿರುವ ಲಿಂಗ ಉದ್ಭವಗೊಂಡಿರುವುದಾಗಿ ಪುರಾಣವಿದೆ. ಅಲ್ಲದೆ, ಭಕ್ತಿಯಿಂದ ಬೇಡಿದರೆ ವಿವಾಹ ಭಾಗ್ಯ ಹಾಗೂ ಮಕ್ಕಳ ಭಾಗ್ಯವನ್ನು ಪಾರ್ವತಿ ನೀಡುತ್ತಾಳೆ ಎನ್ನುತ್ತಾರೆ ಇಲ್ಲಿನ ಭಕ್ತರು.
ವಿಶೇಷವಾಗಿ ಮುಡುಕುತೊರೆಯಲ್ಲಿ ಬೆಟ್ಟಳ್ಳಿ ಮಾರಮ್ಮ ನೆಲೆಸಿರುವಂತೆ ಕನಕಗಿರಿಯಲ್ಲಿ ಗುಡ್ಡದ ಮಾರಮ್ಮ ತಾಯಿ ದೇವಾಲಯವನ್ನು ಕಾಣಬಹುದಾಗಿದೆ. ಹಾಗೆಯೇ ಪವಾಡ ಪುರುಷ ಕೆಂಡಗಣ್ಣಸ್ವಾಮಿ ಅವರ ಮಠವಿದ್ದು, ಗುಡ್ಡದ ಸಮೀಪದ ಜಮೀನಿನಲ್ಲಿ ಅವರ ಗದ್ದುಗೆ ಸಹ ಇದೆ. ಮೈಸೂರಿನ ಜಯಚಾಮರಾಜ ಒಡೆಯರ್ ಅವರ ಒಡನಾಟ ಈ ಸುಕ್ಷೇತ್ರಕ್ಕಿತ್ತು ಎಂದು ಹಿರಿಯರು ಹೇಳುತ್ತಾರೆ.
ಕುದುರೆ ಕೈಲಾಸ ಸೇರಿತು: ಈ ಹಿಂದೆ ಪಂಚಲಿಂಗದರ್ಶನ ವೇಳೆ ಎಲ್ಲ ಲಿಂಗಗಳನ್ನು ನೋಡಿದ ಅಂದಿನ ಮೈಸೂರಿನ ಮಹಾರಾಜರೊಬ್ಬರು ಕೊನೆಯದಾಗಿ ಕನಕಗಿರಿಯ ಶಿವಲಿಂಗವನ್ನು ದರ್ಶನ ಪಡೆಯಲು ಬಂದರಂತೆ. ಈ ವೇಳೆ ಕುದುರೆ ಇಳಿದ ರಾಜರು ಲಿಂಗ ದರ್ಶನ ಮಾಡುವ ವೇಳೆ ಕುದುರೆ ಕೈಲಾಸಕ್ಕೆ ಹೊರಟು ಹೋಯಿತು ಎಂಬುದಾಗಿ ಗ್ರಾಮದ ಹಿರಿಯರು ಹೇಳುತ್ತಾರೆ. ಅದಕ್ಕಾಗಿಯೇ, ಕನಕಗಿರಿಗೂ ಪಾರ್ವತಿ-ಪರಮೇಶ್ವರರ ಕೈಲಾಸಕ್ಕೂ ನಂಟಿದೆ ಎಂದು ಹೇಳಲಾಗುತ್ತದೆ.
ಪವಾಡ ಪುರುಷ ಕೆಂಡಗಣ್ಣಸ್ವಾಮಿ ಗದ್ದುಗೆ: ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ನಂಜನಗೂಡು ಹಾಗೂ ಕನಕಗಿರಿ ಗುಡ್ಡದ ಮೇಲೆ ಕೆಂಡಗಣ್ಣಸ್ವಾಮಿ ಅವರಿಗೆ ಮಠವನ್ನು ನಿರ್ಮಿಸಿ ಕೊಟ್ಟಿದ್ದರು ಎಂದು ಹೇಳಲಾಗುತ್ತದೆ. ಮೈಸೂರಿನ ಹಲವು ರಾಜರು ಕನಕಗಿರಿ ಕ್ಷೇತ್ರಕ್ಕೆ ಬರುತ್ತಿದ್ದರಂತೆ.
ವಿಶೇಷ ಪೂಜೆ: ಆಷಾಡ ಮಾಸದಲ್ಲಿ ಮಂಗಳವಾರ ದಿನಗಳಂದೂ ಶಕ್ತಿ ದೇವತೆ ಗುಡ್ಡದ ಮಾರಮ್ಮನಿಗೆ ಸರ್ವ ಜನಾಂಗದ ಜನರು ತಂಪಿನ ಪೂಜೆ ನೆರವೇರಿಸುತ್ತಾರೆ. ಕೊಂಡೋತ್ಸವ ಸಹ ನೆರವೇರಿಸಲಾಗುತ್ತದೆ. ಸುತ್ತಮುತ್ತ ಗ್ರಾಮದ ಜನರು ವರ್ಷವಿಡೀ ಕ್ಷೇತ್ರಕ್ಕೆ ಬಂದು ಕುರಿ-ಕೋಳಿ ಹರಕೆ ತೀರಿಸುತ್ತಾರೆ.
ಮಲ್ಲಿಕಾರ್ಜುನ ಹಾಗೂ ಪಾರ್ವತಿ ದೇವಾಲಯದಲ್ಲಿ ಮಾಘ ಮಾಸದಲ್ಲಿ ಪರ್ವತ ಪರುಶೆ, ದಾಸೋಹ ನಡೆಯುತ್ತದೆ. ವಿಶೇಷವಾಗಿ ಶಿವರಾತ್ರಿಗೆ ಕಥಾ-ಕಲಾಕ್ಷೇಪ ನಡೆಯುತ್ತದೆ. ಶ್ರವಣ ಮಾಸದಲ್ಲಿ ಪ್ರತಿ ಶನಿವಾರನವಗ್ರಹ, ಕಥಾ-ಕಲಾಕ್ಷೇಪ ನಡೆಯುತ್ತದೆ. ಕ್ಷೇತ್ರದಲ್ಲಿ ವಿವಾಹ, ನಿಶ್ಚಿತಾರ್ಥ, ನಾಮಕರಣ ಇತ್ಯಾದಿ ಶುಭಾ ಸಮಾರಂಭಗಳು ಸಹ ನಡೆಯುತ್ತವೆ. ಅಚ್ಚರಿ ಏನೆಂದರೆ ಶಿವರಾತ್ರಿ ಮರು ದಿನ ದಿನ ಸೂರ್ಯನ ಕಿರಣಗಳು ಲಿಂಗದ ಮೇಲೆ ನೇರವಾಗಿ ಬೀಳುತ್ತದೆ.
ಶಿವರ್ಚಾಕರಾದ ಶಿವಪ್ಪ, ಮಹೇಶ್, ಸುರೇಶ್, ಪ್ರಕಾಶ್ ಮತ್ತು ಕುಟುಂಬ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪಾರ್ವತಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಗುಡ್ಡದ ಮಾರಮ್ಮನ ದೇವಾಲಯದಲ್ಲಿ ಜಡೆಲಿಂಗಶೆಟ್ಟಿ, ಬಸಲಿಂಗಶೆಟ್ಟಿ ಪೂಜೆ ನೆರವೇರಿಸುತ್ತಾರೆ.
ಶ್ರೀಶೈಲದಷ್ಟೇ ಕನಕಗಿರಿ ಪ್ರಾಮುಖ್ಯತೆ ಹೊಂದಿರುವ ಧಾರ್ಮಿಕ ಸ್ಥಳವಾಗಿದೆ. ಪಾರ್ವತಿ, ಪರಮೇಶ್ವರ ಹಾಗೂ ಗುಡ್ಡದ ಮಾರಮ್ಮ ಶಕ್ತಿ ದೇವತೆಗಳಾಗಿದ್ದು, ಈ ಭಾಗದ ಜನರ ಆರಾಧ್ಯ ದೈವವಾಗಿದ್ದಾರೆ. ಕ್ಷೇತ್ರದಲ್ಲಿ ವರ್ಷವಿಡೀ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯುತ್ತವೆ. ವಿಶೇಷವಾಗಿ ಕೆಂಡಗಣ್ಣಸ್ವಾಮಿಗಳ ಮಠವಿತ್ತು. ಕಾಲ ಕ್ರಮೇಣ ಹಾನಿಗೊಳಗಾಗಿ ಅವಶೇಷ ಮಾತ್ರ ಉಳಿದಿದೆ.
ಜಯಶಂಕರ ಮೂರ್ತಿ, ವ್ಯವಸ್ಥಾಪಕ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪಾರ್ವತಿ ದೇವಾಲಯ.
ಶ್ರೀ ಕನಕಗಿರಿ ಕ್ಷೇತ್ರ ಪುರಾಣ ಪ್ರಸಿದ್ಧಿಯಾದ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ ಮಲ್ಲಿಕಾರ್ಜುನ ಸ್ವಾಮಿ, ಪಾರ್ವತಿ ದೇವಿ, ಗುಡ್ಡದ ಮಾರಮ್ಮ ನೆಲಿಸಿದ್ದು, ಹನೂರು ಹಾಗೂ ಕೊಳ್ಳೇಗಾಲ ಭಾಗದ ಜನರ ಪಾಲಿನ ಶಕ್ತಿ ದೇವತೆಗಳಾಗಿವೆ. ಹಿಂದೆಲ್ಲ ಇಲ್ಲಿ ಜಾತ್ರೆ, ತೇರು ನಡೆಯುತ್ತಿದ್ದವು. ಆದರೀಗ ವಾರದಲ್ಲಿ 2 ದಿನ ಪೂಜೆ ಹಾಗೂ ಹಬ್ಬದ ದಿನಗಳಲ್ಲಿ ದೇವಾಲಯ ಭಕ್ತರಿಗೆ ಮುಕ್ತವಾಗಿದೆ. ದೇವಾಲಯ ಮತ್ತಷ್ಟು ಅಭಿವೃದ್ಧಿ ಹೊಂದಬೇಕಿದೆ.
ನಟರಾಜಪ್ಪ, ಭಕ್ತ, ಹರ್ಷ ಹೋಟೆಲ್ ಮಾಲೀಕ , ಕೊಳ್ಳೇಗಾಲ.
ಮಾರ್ಗ: ಕೊಳ್ಳೇಗಾಲದಿಂದ 14 ಕಿ.ಮಿ ದೂರದಲ್ಲಿ ದೊಡ್ಡಿಂದುವಾಡಿ ಗ್ರಾಮವಿದ್ದು, ಶ್ರೀ ಕನಕಗಿರಿ ಕ್ಷೇತ್ರ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಗ್ರಾಮದ ಮುಖ್ಯ ರಸ್ತೆಯಿಂದ ಗುಂಡಾಲ್ ಜಲಾಶಯಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಶ್ರೀೀ ಕನಕಗಿರಿ ಭ್ರಮರಾಂಬ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ.