ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ವಿಶ್ವ ಜಾನಪದ ದಿನಾಚರಣೆ ಆಂಗವಾಗಿ ಲಿಂಗರಾಜನಗರ (ದಕ್ಷಿಣ) ಸಮುದಾಯ ಭವನದಲ್ಲಿ ಆ. 29ರಂದು ಸಂಜೆ 6.45ಕ್ಕೆ ಅಂಗುಲಿಮಾಲ ದೊಡ್ಡಾಟ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜನಪದ ಕಲಾಬಳಗ ಟ್ರಸ್ಟ್ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರಗಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ (ಗೊಟಗೋಡಿ)ದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ ಉದ್ಘಾಟಿಸುವರು. ಕುಲಸಚಿವರಾದ ಪ್ರೊ. ಸಿ.ಟಿ. ಗುರುಪ್ರಸಾದ, ಪ್ರೊ. ಶಿವಶಂಕರ ಕೆ. ಹಾಗೂ ಸಹಾಯಕ ಕುಲಸಚಿವ ಶಹಜಹಾನ ಮುದಕವಿ ಪಾಲ್ಗೊಳ್ಳುವರು ಎಂದರು.
ತಥಾಗತ ಗೌತಮ ಬುದ್ಧರ ಸಮಾಜಮುಖಿ ಸಂದೇಶವುಳ್ಳ ಅಂಗುಲಿಮಾಲ ದೊಡ್ಡಾಟವನ್ನು ರಮೇಶ ಕರಬಸಮ್ಮನವರ ರಚಿಸಿ ನಿರ್ದೇಶಿಸಿದ್ದಾರೆ. ಪೊಲೀಸ್ ಇನ್ಸಪೆಕ್ಟರ್ ಡಾ. ಜ್ಯೋತಿರ್ಲಿಂಗ ಹೊಸಕಟ್ಟಿ, ಬಿರೇಶ ತಳ್ಳಿಕೇರಿ, ಸುನೀಲ ಲಕ್ಕುಂಡಿ, ಕಾಂತೇಶ ದ್ಯಾಮಣ್ಣವರ ಸೇರಿ ಸ್ಥಳೀಯರೇ ಆದ 25 ಕಲಾವಿದರು ಅಭಿನಯಿಸಿದ್ದಾರೆ. ಲಿಂಗರಾಜನಗರ ಕ್ಷೇಮಾಭಿವೃದ್ಧಿ ಸಂಘ ಪ್ರದರ್ಶನಕ್ಕೆ ಸಹಕಾರ ನೀಡಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಶಾಂತ ಚೌಡಾಪುರ, ವಿನಯ ಲಿಂಗಾರೆಡ್ಡಿ, ಎನ್.ಎಸ್. ಮನಗುಳಿ, ಸುಚಿತ ಅಂಗಡಿ, ಇತರರು ಇದ್ದರು.