ಜಿಲ್ಲೆ

ದೊಡ್ಡಮೋಳೆಯಲ್ಲಿ ಅದ್ಧೂರಿ ಕೊಂಡೋತ್ಸವ

ಚಾಮರಾಜನಗರ: ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ಶ್ರೀಮಂಟೇಸ್ವಾಮಿ, ಶ್ರೀರಾಚಪ್ಪಾಜಿ, ಶ್ರೀದೊಡ್ಡಮ್ಮತಾಯಿ ಕೊಂಡೋತ್ಸವ ಸಾವಿರಾರು ಭಕ್ತ ಸಮ್ಮುಖದಲ್ಲಿ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು.

ಗ್ರಾಮದ ಶ್ರೀಮಂಟೇಸ್ವಾಮಿ ದೇವಸ್ಥಾನದ ಮುಂಭಾಗ ಗುರುವಾರ ರಾತ್ರಿಯೇ ಸೌಧೆಗೆ ಬೆಂಕಿ ಸ್ಪರ್ಶ ಮಾಡಲಾಯಿತು. ಶುಕ್ರವಾರ ಮುಂಜಾನೆಯೇ ಗ್ರಾಮದ ಹೊರವಲಯದಲ್ಲಿ ದೇವರ ಉತ್ಸವಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಅಲ್ಲಿಂದ ಹೊರಟ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನದ ಮುಂಭಾಗಕ್ಕೆ ಬಂದಿತು. ಬಳಿಕ ಸಿದ್ಧಪಡಿಸಿದ್ದ ಕೊಂಡವನ್ನು ನಾಲ್ವರು ತಮ್ಮಡಿಗಳು ಹಾಯುವ ಮೂಲಕ ಕೊಂಡೊತ್ಸವ ನೆರವೇರಿತು. ಈ ವೇಳೆ ಭಕ್ತರ ಅರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಕೊಂಡೋತ್ಸವ ಹಿನ್ನೆಲೆಯಲ್ಲಿ ದೊಡ್ಡಮೋಳೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಆಗಮಿಸಿದ್ದರು. ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಕೊಂಡೋತ್ಸವದಲ್ಲಿ ಭಾಗವಹಿಸಿ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.