ಜಿಲ್ಲೆ

ದೊಡ್ಡಬಳ್ಳಾಪುರದಲ್ಲಿ ಮೈತ್ರಿಗೆ ಜಯ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಿರೀಕ್ಷೆಯಂತೆಯೇ ದೊಡ್ಡಬಳ್ಳಾಪುರ ನಗರಸಭೆ ಅಧಿಕಾರವನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮುಂದುವರಿಸಿದೆ.
ಅಧ್ಯಕ್ಷರಾಗಿ ಬಿಜೆಪಿಯ ಸುಮಿತ್ರಾ ಆನಂದ್, ಉಪಾಧ್ಯಕ್ಷರಾಗಿ ಜೆಡಿಎಸ್‌ನ ಮಲ್ಲೇಶ್ ಆಯ್ಕೆಯಾಗಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಮೊದಲೇ ಅಧಿಕಾರ ಹಂಚಿಕೆಯ ಒಪ್ಪಂದ ಮಾಡಿಕೊಂಡಿದ್ದವು. ಈ ಪ್ರಕ್ರಿಯೆ ಸುಗಮವಾಗಿ ಸಾಗುವ ಮೂಲಕ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವುದಕ್ಕಾಗಿ ಶಾಸಕ ಧೀರಜ್ ಮುನಿರಾಜು ರಣತಂತ್ರ ರೂಪಿಸಿದ್ದರು. ನಿರೀಕ್ಷೆಯಂತೆಯೇ ಅಧ್ಯಕ್ಷ ಸ್ಥಾನ ಬಿಜೆಪಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಗೆ ದೊರೆತಿದೆ.
ಅಧ್ಯಕ್ಷ ಸ್ಥಾನಕ್ಕೆ ಕಮಲ-ದಳ ಮೈತ್ರಿಯಿಂದ ಸ್ಪರ್ಧಿಸಿದ್ದ ಬಿಜೆಪಿಯ ಸುಮಿತ್ರಾ ಆನಂದ್ ಅವರಿಗೆ ಸಂಸದ ಮತ್ತು ಶಾಸಕರಿಬ್ಬರ ಮತ ಸೇರಿ 23 ಮತಗಳು ಲಭಿಸಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರೂಪಿಣಿ ಮಂಜುನಾಥ್ 10 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್‌ನ ಮಲ್ಲೇಶ್ ಅವರಿಗೆ ಸಂಸದ ಮತ್ತು ಶಾಸಕ ಇಬ್ಬರ ಮತ ಸೇರಿ 23 ಮತಗಳು ಲಭಿಸಿದ್ದು, ಕಾಂಗ್ರೆಸ್‌ನ ಆನಂದ್ 10 ಮತಗಳನ್ನು ಪಡೆದು ಮಲ್ಲೇಶ್ ವಿರುದ್ಧ ಸೋಲೊಪ್ಪಿಕೊಂಡರು.
ಚುನಾವಣಾಧಿಕಾರಿಗಳಾಗಿ ಉಪವಿಭಾಗಾಧಿಕಾರಿ ದುರ್ಗಾ ಶ್ರೀ, ತಹಸೀಲ್ದಾರ್ ವಿಭಾವಿದ್ಯಾ ರಾಠೋಡ್, ಪೌರಾಯುಕ್ತ ಕಾರ್ತಿಕೇಶ್ವರ್ ಕರ್ತವ್ಯ ನಿರ್ವಹಿಸಿದರು.

ವಿಪ್ ಜಾರಿ: ಚುನಾವಣೆ ಹಿನ್ನೆಲೆಯಲ್ಲಿ ಮೂರು ಪಕ್ಷಗಳಿಂದ ವಿಪ್ ಜಾರಿ ಮಾಡಲಾಗಿತ್ತು. ಈ ಪೈಕಿ ಇಬ್ಬರು ಸದಸ್ಯರು ವಿಪ್ ಉಲ್ಲಂಘನೆ ಮಾಡಿ ಮತದಾನ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಎಂ.ಜಿ ಶ್ರೀನಿವಾಸ್ ಹಾಗೂ ಜೆಡಿಎಸ್‌ನ ಹಸೀನತಾಜ್ ವಿಪ್ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ. ಇತ್ತ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಶಿವಶಂಕರ್ ಹಾಗೂ ಶಿವಣ್ಣ ವಿಪ್‌ಗೆ ಮನ್ನಣೆ ನೀಡಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿದ್ದಾರೆ.

ಎನ್‌ಡಿಎ ಮೈತ್ರಿಗೆ ಪಕ್ಷೇತರರೂ ಬೆಂಬಲ ಸೂಚಿಸಿದ್ದು, 31 ಮತಗಳಲ್ಲಿ 23 ಮತಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ. ಬಿಜೆಪಿಗೆ ಅಧ್ಯಕ್ಷ ಸ್ಥಾನ, ಜೆಡಿಎಸ್‌ಗೆ ಉಪಾಧ್ಯಕ್ಷ ಸ್ಥಾನ ಹಂಚಿಕೊಂಡು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬಂತೆ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲಾಗುವುದು. ಎಲ್ಲ್ಲ ವಾರ್ಡ್‌ಗಳಿಗೂ ಸಮಾನ ಆದ್ಯತೆ ನೀಡಿ ನಗರದ ಅಭಿವೃದ್ಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಶ್ರಮಿಸಲಿ.ಧೀರಜ್ ಮುನಿರಾಜು ಶಾಸಕ ಶಾಸಕ ಧೀರಜ್ ಮುನಿರಾಜು ಮತ್ತು ಜೆಡಿಎಸ್ ಮುಖಂಡ ಬಿ.ಮುನೇಗೌಡ ಸೇರಿ ಎರಡೂ ಪಕ್ಷಗಳ ನಾಯಕರ ನೇತೃತ್ವದಲ್ಲಿ ನಗರಸಭೆ ಚುನಾವಣೆಯಲ್ಲಿ ಎನ್‌ಡಿಎ ಜಯಭೇರಿ ಬಾರಿಸಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಸಿಗುವಂತಹ ಎಲ್ಲ ಸೌಲಭ್ಯ, ಅನುದಾನಗಳನ್ನು ನಗರಸಭೆಗೆ ನೀಡಲಾಗುವುದು.ಡಾ.ಕೆ ಸುಧಾಕರ್ ಸಂಸದ