ಜಿಲ್ಲೆ

ದೊಡ್ಡಬಳ್ಳಾಪುರದಲ್ಲಿ ದೊಡ್ಡಾಟ

ಅಭ್ಯರ್ಥಿ ವಿರೋಧಿ ಅಲೆಯಿಂದ ಕಾಂಗ್ರೆಸ್‌ಗೆ ಹೊಡೆತ

ಶಿವರಾಜ್ ಎಂ. ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಎದುರು ಈ ಬಾರಿ ಬಿಜೆಪಿ ಅಬ್ಬರಿಸುತ್ತಿರುವುದರಿಂದ ಕ್ಷೇತ್ರದಲ್ಲಿ ತ್ರಿಕೋನ ೈಟ್ ಕಂಡುಬರುತ್ತಿದೆ.
ಕೈ ಭದ್ರಕೋಟೆ ಎನಿಸಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ವಿರೋಧ ಅಲೆ ದಟ್ಟವಾಗಿರುವುದು, ಕಾಂಗ್ರೆಸ್‌ನಲ್ಲಿ ಉಚ್ಚಾಟನೆ ಪ್ರಹಸನ, ಬಣ ರಾಜಕೀಯ ಮತದಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಮಾತು ಕೇಳಿಬರುತ್ತಿದೆ.
ಏತನ್ಮಧ್ಯೆ ಜನೋತ್ಸವ ಮತ್ತಿತರ ಸಮಾವೇಶಗಳ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿರುವುದು, ಕ್ಷೇತ್ರದಲ್ಲಿ ಸತತ 10 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಬದಲಿಗೆ ಹೊಸಬರಿಗೆ ಅವಕಾಶ ನೀಡಬೇಕೆಂಬ ಗಾಳಿ ಬೀಸುತ್ತಿರುವುದು ಬಿಜೆಪಿ ಪಾಲಿಗೆ ವರದಾನವಾಗಿದೆ. ಇದರ ನಡುವೆ ಅನುಕಂಪದ ಅಲೆ ಸಾಂಪ್ರದಾಯಿಕ ಮತಗಳು ಜೆಡಿಎಸ್ ಬೆನ್ನಿಗಿದ್ದು ಬಿಜೆಪಿ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಡುವ ಸನ್ನಿವೇಶ ನಿರ್ಮಾಣವಾಗಿದೆ.
ಹಿಂದಿನಿಂದಲೂ ಮೂರನೇ ಸ್ಥಾನ ಕಾಯ್ದುಕೊಂಡಿದ್ದ ಬಿಜೆಪಿ ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪ್ರಬಲ ಎದುರಾಳಿಯಾಗುವ ಸನ್ನಿವೇಶ ನಿರ್ಮಾಣವಾಗಿದೆ. ರಾಷ್ಟ್ರ ಹಾಗೂ ರಾಜ್ಯ ನಾಯಕರು ಬಿಜೆಪಿ ಅಭ್ಯರ್ಥಿ ಧೀರಜ್‌ಮುನಿರಾಜು ಪರವಾಗಿ ಅಬ್ಬರದ ಪ್ರಚಾರ ನಡೆಸುತ್ತಿರುವುದು ಬಿಜೆಪಿ ಖಾತೆ ತೆರೆಯಬಹುದೆಂಬ ಲೆಕ್ಕಾಚಾರ ಕೇಳಿಬರುತ್ತಿದೆ. ಹತ್ತು ವರ್ಷದ ಅವಧಿಯಲ್ಲಿನ ಕಾಂಗ್ರೆಸ್ ಶಾಸಕರ ವಿರುದ್ಧದ ಅಲೆಯನ್ನೇ ಅಸವಾಗಿಟ್ಟುಕೊಂಡಿರುವ ಬಿಜೆಪಿ ಬದಲಾವಣೆಗೆ ಮತ ನೀಡಿ ಎಂದೇ ಪ್ರಚಾರಕ್ಕಿಳಿದಿದೆ. ಹೊಸಬರಿಗೆ ಮಣೆ ಹಾಕಿದ ಬಿಜೆಪಿ ಲೆಕ್ಕಾಚಾರ ಸರಿಯಾಗಿಯೇ ಇದೆ ಎಂಬ ಮಾತು ಕೇಳಿಬರುತ್ತಿದ್ದು, ಈ ಬಾರಿ ದೊಡ್ಡಬಳ್ಳಾಪುರ ಕಾಂಗ್ರೆಸ್ ತೆಕ್ಕೆಯಿಂದ ಕಮಲ ಪಾಳಯಕ್ಕೆ ಜಾರಲಿದೆಯೇ ಎಂಬ ನಿರೀಕ್ಷೆ ಹುಟ್ಟಿಸಿದೆ.

ಜಾತ್ಯಾತೀತ ಪಕ್ಷಗಳಿಗೆ ಮನ್ನಣೆ: ಕ್ಷೇತ್ರದ ಇತಿಹಾಸ ಗಮನಿಸಿದರೆ ಇಲ್ಲಿ ಜಾತ್ಯಾತೀತ ಪಕ್ಷಗಳೇ ಮೇಲುಗೈ ಸಾಧಿಸುತ್ತಾ ಬಂದಿವೆ. ಆರ್.ಎಲ್.ಜಾಲಪ್ಪ ಕುಟುಂಬ 35 ವರ್ಷ ಕ್ಷೇತ್ರದಲ್ಲಿ ಅಧಿಕಾರ ಹಿಡಿದಿತ್ತು. ಜಾಲಪ್ಪ ಪುತ್ರ ನರಸಿಂಹಸ್ವಾಮಿ ಬಿಜೆಪಿ ಸೇರ್ಪಡೆಯಾದ ಬಳಿಕ ಬದಲಾವಣೆ ಗಾಳಿ ಬೀಸಿದರೂ ಮತ್ತೆ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡಿತ್ತು. ಈ ಬಾರಿ ಕಾಂಗ್ರೆಸ್ ತೆಕ್ಕೆಯಿಂದ ಕೈಜಾರುವ ಸನ್ನಿವೇಶ ಕಂಡುಬರುತ್ತಿದೆ. ಅತ್ತ ಕಡೆ ಅಬ್ಬರದ ಪ್ರಚಾರ ನಡೆಸುತ್ತಿರುವ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದ್ದಾರೆ.

ಕೈ ಪಡೆಯಲ್ಲಿ ಒಳಜಗಳ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಮತಪ್ರಚಾರಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ್ಯ ಅವರಿಗೆ ಸ್ವಪಕ್ಷೀಯರೇ ಮಗ್ಗಲ ಮುಳ್ಳಾಗಿದ್ದಾರೆ. ದಶಕಗಳ ಕಾಲ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಪ್ರಮುಖ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಶಾಸಕರು ಎಡವಿದ್ದಾರೆ ಎಂಬ ಮಾತು ಹರಿದಾಡುತ್ತಿವೆ. ಪಕ್ಷದ ಮುಖಂಡರ ಒಳಜಗಳ ಮತದಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಬಗ್ಗೆ ಪಕ್ಷದ ಕೆಲವರಲ್ಲೇ ತಳಮಳ ಸೃಷ್ಟಿಸಿದೆ. 10 ವರ್ಷದ ಕಾಂಗ್ರೆಸ್ ಆಳ್ವಿಕೆಯಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ ಎಂಬುದು ಕ್ಷೇತ್ರದ ಮತದಾರರ ಅಸಮಾಧಾನಕ್ಕೆ ಕಾರಣವಾಗಿದ್ದರೆ. ಬಿಜೆಪಿ ಸರ್ಕಾರ ಅನುದಾನ ಕೊಡಲಿಲ್ಲ, ನಾನೇನು ಮಾಡಲು ಸಾಧ್ಯ ಎಂಬ ಶಾಸಕರ ಅಸಹಾಯಕತೆ ಕ್ಷೇತ್ರದ ಜನರಲ್ಲಿ ಮತ್ತಷ್ಟು ಅಸಹನೆ ಹುಟ್ಟಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಕಾರ್ಯಕರ್ತರನ್ನು ಬೆಳೆಸದಿರುವುದು, ಮುಖಂಡರಿಗೆ ಮನ್ನಣೆ ನೀಡದಿರುವ ಆರೋಪಗಳು ದಟ್ಟವಾಗಿರುವ ಹೊತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸುಲಭ ಸಾಧ್ಯವಲ್ಲ ಎಂಬಂಥ ಸನ್ನಿವೇಶ ನಿರ್ಮಾಣವಾಗಿದೆ.

ಜೆಡಿಎಸ್‌ಗೆ ಅನುಕಂಪ ನಿರೀಕ್ಷೆ: 2013ರಲ್ಲಿ ಪಕ್ಷೇತರರಾಗಿ ಹಾಗೂ 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಿ.ಮುನೇಗೌಡ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿದ್ದರೂ ಗೆಲುವಿನ ದಡ ಸೇರುವಲ್ಲಿ ಎಡವಿದ್ದರು. ಮೂರನೇ ಬಾರಿ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮುನೇಗೌಡ ಎರಡು ಬಾರಿಯ ಸೋಲಿನ ಅನುಕಂಪ ಈ ಬಾರಿ ಗೆಲುವಿನ ದಡ ಸೇರಿಸಬಹುದು ಎಂಬ ನಿರೀಕ್ಷೆ ಹೊತ್ತಿದ್ದಾರೆ. ಅಭ್ಯರ್ಥಿ ಪತ್ನಿ ಚುನಾವಣಾ ಪ್ರಚಾರದಲ್ಲಿ ಕಣ್ಣೀರು ಸುರಿಸಿ ಮತಭಿಕ್ಷೆ ನಡೆಸುತ್ತಿರುವುದು ಮಹಿಳಾ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಾಂಪ್ರದಾಯಿಕ ಮತಗಳನ್ನು ಹೊಂದಿರುವ ಜೆಡಿಎಸ್ ಈ ಬಾರಿ ಕಾಂಗ್ರೆಸ್ ಅಧಿಪತ್ಯ ಕೊನೆಗಾಣಿಸಬಹುದು ಎಂಬ ಲೆಕ್ಕಾಚಾರ ಕೇಳಿಬರುತ್ತಿದೆ.

ಯೂತ್ ಐಕಾನ್ ಆಗಿ ಧೀರಜ್ ಮುನಿರಾಜು: ರಾಷ್ಟ್ರ ಹಾಗೂ ರಾಜ್ಯ ನಾಯಕರು ಧೀರಜ್‌ಮುನಿರಾಜ್ ಅವರನ್ನು ಕಣಕ್ಕಿಳಿಸಿದ್ದು, ವರಿಷ್ಠರ ಲೆಕ್ಕಾಚಾರ ತಪ್ಪಬಾರದು ಎಂಬ ಪಣದೊಂದಿಗೆ ಗೆಲುವಿಗೆ ತಂತ್ರ ಹೆಣೆದಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಚುನಾವಣಾ ದಿಕ್ಸೂಜಿ ಎಂದೇ ಬಿಂಬಿತವಾಗಿದ್ದ ಜನೋತ್ಸವ ಸಮಾವೇಶವನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಿ ಪಕ್ಷದ ವರಿಷ್ಠರಿಂದ ಬೆನ್ನು ತಟ್ಟಿಸಿಕೊಂಡ ಮುನಿರಾಜು ಯೂತ್ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಯುವ ಮತದಾರರು, ಮಹಿಳಾ ಮತದಾರರನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಸಾಕಷ್ಟು ಯಶಸ್ವಿಯೂ ಆಗಿರುವ ಬಿಜೆಪಿ ಅಭ್ಯರ್ಥಿ ಈ ಬಾರಿ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಲಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ವಿರೋಧಿ ಅಲೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿಗರು ಅದೇ ಅಸ ಮುಂದಿಟ್ಟುಕೊಂಡು ಬೇಟೆಯಾಡುತ್ತಿದ್ದಾರೆ. ಏತನ್ಮಧ್ಯೆ ಟಿಕೆಟ್ ವಂಚಿತರು ಅಭ್ಯರ್ಥಿ ವಿರುದ್ಧ ಅಸಮಾಧಾನ ಹೊರಹಾಕಿ ಕೆಲವರು ಪಕ್ಷಾಂತರ ಮಾಡಿದರೂ ಇತರ ಪಕ್ಷಗಳಿಂದ ಅಷ್ಟೇ ಪ್ರಭಾವಿ ಮುಖಂಡರನ್ನು ಬಿಜೆಪಿಗೆ ಸೆಳೆದುಕೊಳ್ಳುವಲ್ಲಿ ಧೀರಜ್ ಯಶಸ್ವಿಯಾಗಿರುವುದು ಬಿಜೆಪಿಗೆ ಪ್ಲಸ್ ಆಗಿದೆ. ಸದ್ಯದ ಸನ್ನಿವೇಶದಲ್ಲಿ ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾಗುತ್ತಿದ್ದು, ಚುನಾವಣೆಯಲ್ಲಿ ಬಿಜೆಪಿ ಯಾವ ಕಮಾಲ್ ಮಾಡಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ.