ಮೈಸೂರು: ಶತಮಾನದ ಹೊಸ್ತಿಲಿನಲ್ಲಿರುವ ನಗರದ ದೊಡ್ಡ ಗಡಿಯಾರ ಗೋಪುರದ ಕಾಯಕಲ್ಪ ಕಾಮಗಾರಿಗೆ ಕಡೆಗೂ ಚಾಲನೆ ದೊರೆಯಿತು. ಬುಧವಾರ ಶಾಸಕ ಕೆ. ಹರೀಶ್ ಗೌಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಒಟ್ಟು 8 ತಿಂಗಳ ಅವಧಿಯೊಳಗೆ ಗಡಿಯಾರದ ಕಂಬದ ಸಂರಕ್ಷಣಾ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಕಾಯಕಲ್ಪ ಕಾಮಗಾರಿಗೆ ನಗರ ಪಾಲಿಕೆಯು ಒಟ್ಟು 43 ಲಕ್ಷ ರೂ. ಅನುದಾನ ನೀಡಿದ್ದು, ಕಾಮಗಾರಿಯನ್ನು ಪುರಾತತ್ವ ಸಂಗ್ರಹಾ ಲಯಗಳು ಮತ್ತು ಪರಂಪರೆ ಇಲಾಖೆ ಕೈಗೆತ್ತಿಕೊಂಡಿದೆ. ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆಯಲಿದೆ.
ದೊಡ್ಡಗಡಿಯಾರ ಹಲವು ವರ್ಷಗಳ ಹಿಂದೆಯೇ ದುಸ್ಥಿತಿಗೆ ತಲುಪಿದ್ದು, ಇದರ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ಜಿಲ್ಲಾಡಳಿತ ಹಾಗೂ ನಗರ ಪಾಲಿಕೆಯ ಗಮನ ಸೆಳೆಯುತ್ತಾ ಬಂದರು. ಡಾ.ಗುರುದತ್ತ ಹೆಗಡೆ ಪಾಲಿಕೆ ಆಯುಕ್ತರಾಗಿದ್ದ ಅವಧಿಯಲ್ಲಿ ಡಾ.ಗುರುದತ್ತ ಹೆಗಡೆ, ಡಾ.ಎನ್. ರಂಗರಾಜು ಹಾಗೂ ಇತರರು ದೊಡ್ಡಗಡಿಯಾರವನ್ನು ಏರಿ ಗೋಪುರವನ್ನು ಸಂಪೂರ್ಣ ಪರಿಶೀಲಿಸಿ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾ ಯಿತು. ಆ ನಂತರ ಕೋವಿಡ್ ಹಾಗೂ ವಿವಿಧ ಕಾರಣಗಳಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಕಡೆಗೂ ದೊಡ್ಡಗಡಿಯಾರಕ್ಕೆ ಕಾಯಕಲ್ಪ ಭಾಗ್ಯ ದೊರೆತ್ತಿರುವುದು ಸಂತಸದ ವಿಚಾರ.
ಇನ್ನು ಕೆಲವು ವರ್ಷಗಳ ಕಾಲ ದೊಡ್ಡಗಡಿಯಾರ ಸಂರಕ್ಷಣೆಯಾಗದೆ ಇದ್ದರೆ ಕುಸಿದು ಬೀಳುವ ಆತಂಕವನ್ನು ಸಹ ಎದುರಿಸುತಿತ್ತು. ಗಡಿಯಾರ ಗೋಪುರದ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಳಭಾಗ ಶಿಥಿಲಾವಸ್ಥೆಯಿಂದ ಕೂಡಿದೆ. ಹೆಗ್ಗಣ ಹಾಗೂ ಗೆಜ್ಜಲುಗಳ ಹಾವಳಿಯಿಂದ ದೊಡ್ಡಗಡಿಯಾರದ ತಳಪಾಯ ಕುಸಿಯುವ ಭೀತಿ ಎದುರಿಸುತ್ತಿದೆ. ಸಂರಕ್ಷಣಾ ಕಾಮಗಾರಿ ವೇಳೆಯಲ್ಲಿ ಹೆಗ್ಗಣ ಹಾಗೂ ಗೆಜ್ಜಲುಗಳ ಹಾವಳಿ ನಿಯಂತ್ರಿಸಿ ಅಡಿಪಾಯ ಗಟ್ಟಿಗೊಳಿಸುವ ಕಾರ್ಯ ಸಹ ನಡೆಯಲಿದೆ.
ಕಾಮಗಾರಿಗೆ ಚಾಲನೆ ನೀಡುವ ಸಂದರ್ಭ ನಗರ ಪಾಲಿಕೆ ಉಪ ಮೇಯರ್ ಡಾ.ಜಿ. ರೂಪಾ, ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉಪ ನಿರ್ದೇಶಕಿ ಡಾ.ಸಿ.ಎನ್. ಮಂಜುಳಾ, ಕಾರ್ಯಪಾಲಕ ಇಂಜಿನಿಯರ್ ಮಹೇಶ್ ಹಾಗೂ ಇತರರು ಇದ್ದರು.