ಬೆಟ್ಟದಪುರ; ಮೂರ‌್ನಾಲ್ಕು ದಿನಗಳಿಂದ ಸತತವಾಗಿ ಸುರಿದ ಮಳೆಗೆ ಸಮೀಪದ ಬೆಕ್ಕರೆ ಗ್ರಾಮ ದೊಡ್ಡಕೆರೆ ಏರಿ ಕುಸಿದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಕೆ.ಮಹದೇವ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಶಾಸಕ ಕೆ.ಮಹದೇವ್ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಜಿಲ್ಲಾ ಪಂಚಾಯಿತಿ, ನೀರಾವರಿ, ಕಂದಾಯ ಹಾಗೂ ಸ್ಥಳಿಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕೆರೆ ಏರಿ ದುರಸ್ತಿಪಡಿಸಲು ಶೀಘ್ರ ಕ್ರಮ ವಹಿಸಿ, ನಂತರ ಮಾಹಿತಿ ನೀಡುವಂತೆ ಸೂಚಿಸಿದರು.
ಸೋಮವಾರ ಕೆರೆ ಒಡೆದ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆ.ಚಂದ್ರಮೌಳಿ ಹಾಗೂ ತಾಪಂ ಇಒ ಸಿ.ಆರ್ ಕೃಷ್ಣಕುಮಾರ್ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಕೆರೆ ಏರಿ ದುರಸ್ತಿಪಡಿಸಿ ಪೋಲಾಗುತ್ತಿರುವ ನೀರು ತಡೆಯಲು ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಾಪಂ ಇಒ ಸಿ.ಆರ್ ಕೃಷ್ಣಕುಮಾರ್ ಭರವಸೆ ನೀಡಿದರು. ಭುವನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದಲೂ ದುರಸ್ತಿಗೆ ಅನುದಾನ ಮಂಜೂರು ಮಾಡುವ ಭರವಸೆ ಕೊಟ್ಟರು. ಬಳಿಕ ಮೇಲಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು.
ಬೆಳೆ ಹಾನಿ ಸಂಬಂಧ ದಾಖಲಾತಿ ಪರಿಶೀಲಿಸಿ ಶೀಘ್ರ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುವುದು. ಕೆರೆ ದುರಸ್ತಿಗೆ ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಹಾರ ಒದಗಿಸಲಾಗುವುದು ಎಂದು ತಹಸೀಲ್ದಾರ್ ಕೆ.ಚಂದ್ರಮೌಳಿ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ, ರುಕ್ಕಣ್ಣ, ಪಿಡಿಒ ದೇವರಾಜೇಗೌಡ, ತಂಬಾಕು ಮಂಡಳಿ ಕ್ರಾಪ್ ಕಮಿಟಿ ಸದಸ್ಯ ಮಹೇಶ್, ಮುಖಂಡರಾದ ಬಿ.ವಿ.ಗಿರೀಶ್, ಬಿ.ಕೆ ನಾಗೇಂದ್ರ, ಹೇಮಪ್ರಭಾ, ಕಾಂತರಾಜ್, ಜಯಣ್ಣ, ಜಗದೀಶ್, ಬಸವರಾಜ್, ರವಿಕುಮಾರ್, ಸತೀಶ್, ವಸಂತ್ ಇದ್ದರು.