ಜಿಲ್ಲೆ

ದೊಡ್ಡ ಮೂರ್ತಿ ಮಾಡಿದವರಿಗೆ ಸಂಕಷ್ಟ

ಹುಬ್ಬಳ್ಳಿ: ಗಣೇಶೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ರಾಜ್ಯ ಸರ್ಕಾರ ಹತ್ತಾರು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿರುವುದು ಮೂರ್ತಿ ಕಲಾವಿದರು ಸೇರಿ ಅನೇಕರನ್ನು ಸಂಕಷ್ಟಕ್ಕೆ ದೂಡಿದೆ.

ಪ್ರತಿ ವರ್ಷ ನಾಲ್ಕು ತಿಂಗಳು ಮೊದಲೇ ಕಲಾಕಾರರು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಮೂರ್ತಿ ತಯಾರಿಗೆ ಸಜ್ಜಾಗುತ್ತಾರೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಬೇಡಿಕೆ ಬರುತ್ತದೆ ಎಂದುಕೊಂಡು ದೊಡ್ಡ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ.

ಇದಕ್ಕಾಗಿ ಅವರು ಸಾಲ ಸೋಲ ಮಾಡಿ ದುಡ್ಡು ಹೊಂದಿಸಿಕೊಂಡು ಅಥವಾ ಗಣೇಶೋತ್ಸವ ಸಮಿತಿಯವರಿಂದ ಮುಂಗಡ ಪಡೆದು ಮೂರ್ತಿ ಸಿದ್ಧಗೊಳಿಸುತ್ತಾರೆ. ಹೀಗೆ ನಗರದ ಹಲವು ಕಡೆಗಳಲ್ಲಿ ಮೂರ್ತಿ ಕಲಾವಿದರು ಐದರಿಂದ ಎಂಟು, ಹತ್ತು ಅಡಿಗಳವರೆಗೆ ಮೂರ್ತಿ ತಯಾರಿಸಿದ್ದಾರೆ.

ಆದರೆ, ಈಗ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಏಕಾಏಕಿ ದೊಡ್ಡ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಬೃಹತ್ ಮಂಟಪ ಕಟ್ಟುವಂತಿಲ್ಲ ಎಂದು ಆದೇಶ ಹೊರಡಿಸಿರುವುದು ಕಲಾವಿದರ ಸಂಕಷ್ಟಕ್ಕೆ ಕಾರಣವಾಗಿದೆ.

ಕಿವಿಗೆ ಹಾಕಿಕೊಳ್ಳಲಿಲ್ಲ:

ಅಷ್ಟಕ್ಕೂ ಕಲಾವಿದರು ಕರೊನಾ ಹಿನ್ನೆಲೆಯಲ್ಲಿ ಮೂರ್ನಾಲ್ಕು ತಿಂಗಳಿನಿಂದ ಮಾರ್ಗಸೂಚಿಗಾಗಿ ಬೇಡಿಕೊಳ್ಳುತ್ತಲೇ ಇದ್ದರು. ಜಿಲ್ಲಾಡಳಿತವಾಗಲಿ, ರಾಜ್ಯ ಸರ್ಕಾರವಾಗಲಿ ಕಿವಿಗೆ ಹಾಕಿಕೊಳ್ಳಲಿಲ್ಲ. ಈಗ ಉತ್ಸವಕ್ಕೆ ಮೂರ್ನಾಲ್ಕು ದಿನ ಇರುವಾಗ ಮಾರ್ಗಸೂಚಿ ಪ್ರಕಟಿಸಿರುವುದು ವಿಶೇಷವಾಗಿ ಮೂರ್ತಿ ಕಲಾವಿದರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇನ್ನು ಸ್ಟೇಜ್ ಡೆಕೊರೇಟರ್ಸ್, ಪೆಂಡಾಲ್ ನಿರ್ವಪಕರು, ಸೌಂಡ್ ಸಿಸ್ಟಂ ನಡೆಸುವವರಿಗೆ ಈ ವರ್ಷ ಯಾವುದೇ ಕೆಲಸ ಇಲ್ಲದಂತಾಗಿದೆ. ತಡವಾಗಿ ಗೈಡ್​ಲೈನ್ಸ್ ಪ್ರಕಟವಾಗಿದ್ದರಿಂದ ಇವರೆಲ್ಲ ಕಂಗಾಲಾಗಿದ್ದಾರೆ. ಗಣೇಶೋತ್ಸವಕ್ಕೆ ಏನಾದರೂ ಒಂದಿಷ್ಟು ಉದ್ಯೋಗ ಸಿಕ್ಕೀತು ಎಂಬ ಭರವಸೆ ಕೂಡ ಈಗ ಅವರಿಗೆ ಇಲ್ಲವಾಗಿದೆ.

ವೈಭವ ಮೊಟಕು: ಹುಬ್ಬಳ್ಳಿಯಲ್ಲಿ ದಶಕಗಳಿಂದ ನಡೆಯುತ್ತಿದ್ದ ಪ್ರಥಮ ಪೂಜಿತನ ಅದ್ದೂರಿ ಆರಾಧನೆ, ವೈಭವ ಈ ಬಾರಿ ಮೊಟಕುಗೊಂಡಂತಾಗಿದೆ. ರಾಜ್ಯ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಅನ್ವಯ ಕೇವಲ ನಾಲ್ಕು ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಮೆರವಣಿಗೆ, ಸಾರ್ವಜನಿಕ ಪ್ರದರ್ಶನ ಯಾವುದೂ ಇರುವಂತಿಲ್ಲ.

ಹಾಗಾಗಿ ಹೆಚ್ಚಿನ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂದಿರ ಇಲ್ಲವೇ ಸಣ್ಣ ಮಂಟಪಗಳಲ್ಲಿ ನಡೆಯಲಿದೆ. ಕೆಲ ಸಮಿತಿಯವರು ಒಂದೇ ದಿನ ಮೂರ್ತಿ ಇಟ್ಟು ಪೂಜೆ ಮಾಡಿ ವಿಸರ್ಜನೆ ಮಾಡುವುದಕ್ಕೂ ಸಜ್ಜಾಗಿದ್ದಾರೆ.

ಕೋಲ್ಕತ್ತಾದಿಂದ ಬಂದು ಇಲ್ಲಿ ದೊಡ್ಡ ಮೂರ್ತಿ ತಯಾರಿಸಿ ಕೊಡುತ್ತಿದ್ದ ಕಲಾವಿದರೂ ಈ ಬಾರಿ ಬಂದಿಲ್ಲ. ದೊಡ್ಡ ಮೂರ್ತಿ ಇಲ್ಲದ್ದಕ್ಕೆ ವಿಗ್ರಹಗಳಲ್ಲಿ ವೈವಿಧ್ಯತೆ ತೋರಿಸುವುದಕ್ಕೂ ಕಲಾವಿದರಿಗೆ ಅವಕಾಶ ಇಲ್ಲವಾಗಿದೆ.

‘ಈ ವರ್ಷ 250ಕ್ಕೂ ಹೆಚ್ಚು ಸಣ್ಣ ಗಣಪತಿ ಮೂರ್ತಿಗಳನ್ನೇ ಮಾಡಿದ್ದೇನೆ. ದೊಡ್ಡ ಮೂರ್ತಿಗಳಿಗೆ ಯಾವುದೇ ಸಮಿತಿಯವರು ಬೇಡಿಕೆ ಸಲ್ಲಿಸಿರಲಿಲ್ಲ. ಆದರೂ, ಸರ್ಕಾರ ಎರಡು ತಿಂಗಳು ಮೊದಲೇ ನಿಯಮಾವಳಿ ರೂಪಿಸಿದ್ದರೆ ಅನುಕೂಲವಾಗುತ್ತಿತ್ತು’ ಎಂದು ಗಣಪತಿ ಮೂರ್ತಿ ತಯಾರಕ ವೀರೇಶ ಅಭಿಪ್ರಾಯಪಡುತ್ತಾರೆ.

ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ...

ಮಾರ್ಚ್​ನಿಂದಲೇ ದೊಡ್ಡ ಮೂರ್ತಿ ತಯಾರಿಸಲು ಆರಂಭಿಸಿದ್ದೇನೆ. ಹಗುರ ಇರುವುದರಿಂದ ಗುಜರಾತ ಮಣ್ಣು ತರಿಸಿದ್ದೇನೆ. ಐದರಿಂದ ಎಂಟು ಅಡಿವರೆಗಿನ 50ಕ್ಕೂ ಹೆಚ್ಚು ಗಣಪ ಮೂರ್ತಿಗಳನ್ನು ಮಾಡಿದ್ದೇವೆ. ಜಿಲ್ಲಾಡಳಿತ ಈಗ ನಿರ್ದೇಶನ ನೀಡಿರುವುದರಿಂದ ಸಮಿತಿಯವರು ದೊಡ್ಡ ಮೂರ್ತಿ ಕೇಳುತ್ತಿಲ್ಲ. ಲಕ್ಷಾಂತರ ರೂ. ಸಾಲ ಮಾಡಿ ಸಾಮಗ್ರಿ ತಂದು ಮೂರ್ತಿ ಮಾಡಿದ್ದೇವೆ. ಈಗ ಗ್ರಾಹಕರಿಲ್ಲಂತೆ ಆಗಿದೆ. ಈ ವರ್ಷ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗಲಿದೆ ಎಂದು ಬೆಂಗೇರಿಯ ಕಲಾವಿದ ಅರುಣ ಯಾದವ ಅಳಲು ತೋಡಿಕೊಂಡರು.

ಒಂದೇ ದಿನ: ಹುಬ್ಬಳ್ಳಿಯ ಶೀಲವಂತರ ಓಣಿಯಲ್ಲಿ ಪ್ರತಿ ವರ್ಷ ವೈವಿಧ್ಯಮಯ ಮಂಟಪ ನಿರ್ವಿುಸಿ ಹನ್ನೊಂದು ದಿನ ಮೂರ್ತಿ ಪ್ರತಿಷ್ಠಾಪಿಸಿ ಸಾರ್ವಜನಿಕರ ಗಮನ ಸೆಳೆಯಲಾಗುತ್ತಿತ್ತು. ಆದರೆ, ಈ ಬಾರಿ ಸಂಪ್ರದಾಯ ಉಳಿಸಿಕೊಳ್ಳುವ ಸಲುವಾಗಿ ಒಂದೇ ದಿನ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ನಿರ್ಣಯಿಸಲಾಗಿದೆ ಎಂದು ಉತ್ಸವ ಸಮಿತಿಯ ರಮೇಶ ಬಾಫಣಾ ತಿಳಿಸಿದ್ದಾರೆ.

ಛಬ್ಬಿ ಗಣೇಶೋತ್ಸವಕ್ಕೆ ಪ್ರವೇಶ ನಿಷೇಧ

ಹುಬ್ಬಳ್ಳಿ: ಪ್ರತಿ ವರ್ಷ ಸಂಭ್ರಮ, ಸಡಗರದಿಂದ ನಡೆಯುತ್ತಿದ್ದ ತಾಲೂಕಿನ ಛಬ್ಬಿ ಗಣೇಶೋತ್ಸವ ಈ ಬಾರಿ ಅತ್ಯಂತ ಸರಳವಾಗಿ ನಡೆಯುತ್ತಿದ್ದು, ವೀಕ್ಷಣೆಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ.

ಈ ಬಾರಿಯೂ ಮೂರು ದಿನ ಕೆಂಪು ಗಣೇಶನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಪೂಜಾ ವಿಧಿ ವಿಧಾನಗಳು ಎಂದಿನಂತೆ ನಡೆಯಲಿವೆ. ಮೂರನೇ ದಿನ ಮೂರ್ತಿ ವಿಸರ್ಜನೆ ಯಥಾ ಪ್ರಕಾರ ಜರುಗಲಿದೆ.

ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿರುವುದರಿಂದ ಛಬ್ಬಿಯ ಕುಲಕರ್ಣಿ ಮನೆತನದ ಗಣೇಶೋತ್ಸವಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಗಣೇಶೋತ್ಸವಕ್ಕೆ ಬರುವ ಜನರ ಆರೋಗ್ಯ ದೃಷ್ಟಿಯಿಂದ ಕುಲಕರ್ಣಿ ಮನೆತನದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕ ಭಕ್ತರು ಸಹಕರಿಸಬೇಕು ಎಂದು ಕುಲಕರ್ಣಿ ಕುಟುಂಬದವರು ಮನವಿ ಮಾಡಿದ್ದಾರೆ.