ಜಿಲ್ಲೆ

ದೊಡ್ಡ ಆರ್ಥಿಕ ವ್ಯವಸ್ಥೆಯಾಗಲು ಮಹಿಳಾ ಕಾರ್ಯಪಡೆ ಹೆಚ್ಚಲಿ

ಮೈಸೂರು: ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಂಡರೆ ಭಾರತವು ದೊಡ್ಡ ಆರ್ಥಿಕ ವ್ಯವಸ್ಥೆಯಾಗಬಹುದು ಎಂದು ವಿಪ್ರೋ ಲಿಮಿಟೆಡ್‌ನ ಗ್ಲೋಬಲ್ ಟ್ಯಾಕ್ಸ್ ಮುಖ್ಯಸ್ಥ ಶ್ರೀರಾಮ್ ರಂಗನಾಥನ್ ಹೇಳಿದರು.

ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ (ಬಿಸಿಐಸಿ) ಸಹಯೋಗದೊಂದಿಗೆ ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್‌ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪಮೆಂಟ್ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ‘ಕಾರ್ಪೊರೇಟ್ ಹಣಕಾಸು ಮತ್ತು ಹಣಕಾಸು ಮಾರ್ಕೆಟ್‌ಗಳಲ್ಲಿನ ಉದಯೋನ್ಮುಖ ಪ್ರವೃತ್ತಿಗಳು’ ಕುರಿತು 12ನೇ ಅಂತಾರಾಷ್ಟ್ರೀಯ ಆರ್ಥಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶವು ಅತಿ ದೊಡ್ಡ ಅಥವಾ ಎರಡನೇ ದೊಡ್ಡ ಆರ್ಥಿಕ ವ್ಯವಸ್ಥೆಯಾಗಲು ತನ್ನ ಮಹಿಳಾ ಕಾರ್ಯಪಡೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಮಹಾನಗರಗಳಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಆದರೆ, ರಾಷ್ಟ್ರ ಮಟ್ಟದಲ್ಲಿ ಈ ಏರಿಕೆಯು ಕಡಿಮೆಯೇ ಇದೆ. ಭಾರತದ ಆರ್ಥಿಕಮಟ್ಟ ಉತ್ತಮವಾಗಲು ಈ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕು. ನಮ್ಮ ದೇಶದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ, ಮಹಿಳಾ ಕಾರ್ಯಪಡೆಯ ಈಗಿನ ಸಂಖ್ಯೆ ಕಡಿಮೆ.

ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ನಾವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಆಗ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗುವತ್ತ ಮುಂದುವರಿಯಬಹುದು ಎಂದು ಹೇಳಿದರು.

ಭಾರತದ ಬಂಡವಾಳ ಮಾರುಕಟ್ಟೆಗಳ ವಿಕಾಸ, ವಿದೇಶಿ ಬಂಡವಾಳ ಹೂಡಿಕೆಗಳ ಚಂಚಲತೆಯ ವಿರುದ್ಧ ಸ್ಥಿರತೆಯನ್ನು ಒದಗಿಸುವಲ್ಲಿ ದೇಶೀಯ ಹಣಕಾಸು ಸಂಸ್ಥೆಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದ ಅವರು, ಜಾಗತಿಕ ಅನಿಶ್ಚಿತತೆಯ ಈ ಸಂದರ್ಭದಲ್ಲಿ ಭಾರತೀಯ ಮಾರುಕಟ್ಟೆಯ ಚೇತರಿಕೆಯು ಭವಿಷ್ಯದ ಬೆಳವಣಿಗೆಯ ಧನಾತ್ಮಕ ಲಕ್ಷಣವಾಗಿದೆ ಎಂದರು.

ಆರ್ಥಿಕತೆಯ ಭವಿಷ್ಯವನ್ನು ರೂಪುಗೊಳಿಸುವಲ್ಲಿ ಆಧುನಿಕ ಕೃತಕ ಬುದ್ಧಿಮತ್ತೆಯ ಪಾತ್ರದ ಬಗ್ಗೆ ಒಳನೋಟ ಪ್ರಸ್ತುತಪಡಿಸಿದರು.

ಸಹ ಪ್ರಾಧ್ಯಾಪಕ ಡಾ.ಎಂ.ಶ್ರೀರಾಮ್ ಅವರು ಜಾಗತಿಕ ಸವಾಲುಗಳ ನಡುವೆ ಭಾರತೀಯ ಆರ್ಥಿಕ ಮಾರುಕಟ್ಟೆಯ ಅಭಿವೃದ್ಧಿಗೆ ಅನುಕೂಲಕರ ಅಂಶಗಳ ಬಗ್ಗೆ ಮಾತನಾಡಿದರು. ಪ್ರಾಧ್ಯಾಪಕ ಡಾ.ಮೌಸುಮಿ ಸೇನ್ ಗುಪ್ತ ಅವರು ಹಣಕಾಸು ವಿನಿಮಯದ ಡಿಜಿಟಲೀಕರಣ, ಅದರ ಮಹತ್ವ ಹಾಗೂ ಆರ್ಥಿಕ ಒಳಗೊಳ್ಳುವಿಕೆಯ ಮೇಲೆ ಅದರ ಪ್ರಭಾವದ ಬಗ್ಗೆ ಮಾತನಾಡಿದರು.

ದೇಶದ ವಿವಿಧ ಭಾಗಗಳಿಂದ ಸಮ್ಮೇಳನಕ್ಕೆ ಆಗಮಿಸಿರುವ ತಜ್ಞರು, ಲೇಖಕರಿಂದ ಸಮ್ಮೇಳನದಲ್ಲಿ ವಿಷಯ ಮಂಡಿಸಿದರು. ಸಹ ಪ್ರಾಧ್ಯಾಪಕ ಡಾ. ಎಸ್.ಕಣ್ಣದಾಸ್ ಸೇರಿದಂತೆ ಇನ್ನಿತರರಿದ್ದರು.