ಕೆ.ಆರ್.ಪೇಟೆ: ಮಕ್ಕಳಿಂದ ವೃದ್ಧರವರೆಗಿನ ಎಲ್ಲರಿಗೂ ಪೌಷ್ಟಿಕ ಆಹಾರದ ಅಗತ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಶೀಳನೆರೆ ಹೋಬಳಿಯ ಸಿಂಧಘಟ್ಟ ಗ್ರಾಮದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಪ್ರಯುಕ್ತ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಶನಿವಾರ ಉಧ್ಘಾಟಿಸಿ ಮಾತನಾಡಿದರು.
ಪೌಷ್ಟಿಕ ಆಹಾರ ಪದಾರ್ಥಗಳು ಮಾನವನ ಸರ್ವಾಂಗೀಣ ಬೆಳವಣಿಗೆಗೆ ಅವಶ್ಯಕವಾಗಿರುವ ಎಲ್ಲ ಬಗೆಯ ಪೋಷಕಾಂಶಗಳನ್ನು ಒದಗಿಸುವುದಲ್ಲದೆ ಮಾನವನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕಾರಣವಾಗುವುದರಿಂದ ಎಳೆಯ ಮಕ್ಕಳಿನಿಂದ ಮುಪ್ಪಿನ ವಯಸ್ಸಿನವರೆಗಿನ ಎಲ್ಲರೂ ಪೋಷಕಾಂಶಗಳುಳ್ಳ ಸಮತೋಲನ ಆಹಾರವನ್ನು ಸೇವಿಸಬೇಕು. ಯಾವುದೇ ಒಂದು ಪೋಷಕಾಂಶ ಕಡಿಮೆಯಾದರೂ ಅದಕ್ಕೆ ಸಂಬಂಸಿದ ಅಂಗಾಂಗ ಬೆಳವಣಿಗೆ ಹೊಂದದೇ ಕುಂಠಿತವಾಗುತ್ತದೆ. ಇದಕ್ಕಾಗಿಯೇ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ, ಗರ್ಭಿಣಿಯರು, ಬಾಣಂತಿಯರಿಗೆ ಮೊಳಕೆಕಾಳು, ಮೊಟ್ಟೆ, ಹಾಲು, ಬೆಲ್ಲ, ಶೇಂಗಾಚಿಕ್ಕಿ, ಹೆಸರುಕಾಳು, ಕಡಲೆಕಾಳು ಸೇರಿದಂತೆ ವಿವಿಧ ಬಗೆಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ಒದಗಿಸಲಾಗುತ್ತಿದೆ. ಇವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಿಂಧಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ.ಮನೋಜ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಂತಮ್ಮ, ಪೋಷಣ್ ಅಭಿಯಾನದ ವನಜಾಕ್ಷಿ, ಆರೋಗ್ಯ ಇಲಾಖೆಯ ಜಯಶೀಲ ಸೇರಿದಂತೆ ಸಿಂಧಘಟ್ಟ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.