ಜಿಲ್ಲೆ

ದೈಹಿಕ, ಮಾನಸಿಕ ಬೆಳವಣಿಗೆ ಮುಖ್ಯ

ಕಲಬುರಗಿ: ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಬೆಳವಣಿಗೆ ಆಗುತ್ತದೆ. ಹೆಚ್ಚು ಹೆಚ್ಚು ಕ್ರೀಡಾಕೂಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ರಾಜ್ಯ, ರಾಷ್ಟçಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಕಮಲಾಪುರ ತಾಪಂ ಇಒ ನೀಲಗಂಗಾ ಸಲಹೆ ನೀಡಿದರು.

ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ದಸರಾ ಸಿಎಂ ಕಪ್ ಕಮಲಾಪುರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಸೋಲು, ಗೆಲುವು ಎನ್ನದೆ ಉತ್ಸಾಹದಿಂದ ಆಟೋಟಗಳಲ್ಲಿ ತೊಡಗಿಸಿಕೊಳ್ಳಬೇಕು. ಕಮಲಾಪುರ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದರು.

ಸಹಾಯಕ ನಿರ್ದೇಶಕ ಕೆ. ಸುರೇಶ ಮಾತನಾಡಿ, ಕ್ರೀಡಾಕೂಟಗಳು ಪ್ರತಿಭೆಗೆ ಬಹುದೊಡ್ಡ ವೇದಿಕೆಯಾಗಿದೆ. ಸೆ.೨೫ರಂದು ಜಿಲ್ಲಾ ಮಟ್ಟದ, ಸೆ.೨೮ರಂದು ವಿಭಾಗದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ. ವಿಜೇತರಿಗೆ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಸುವರ್ಣ ಅವಕಾಶ ದೊರೆಯಲಿದೆ. ನಮ್ಮ ಭಾಗದ ಪಟುಗಳು ಉತ್ತಮ ಪ್ರತಿಭೆ ತೋರಿಸಿ, ಸಾಧಕರಾಗಿ ಹೊರಹೊಮ್ಮಬೇಕು ಎಂದು ಶುಭ ಹಾರೈಸಿದರು.

ಕಮಲಾಪುರ ಪಪಂ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ದೈಹಿಕ ಶಿಕ್ಷಣ ವಿಷಯ ಪರೀಕ್ಷಕ ಸಂತೋಷ ಡಿಗ್ಗಿ, ಮಹೇಶ ಬಸಕೋಡ, ಸಂಜಯ ಬಾಣದ, ಪ್ರವೀಣ ಪುಣೆ, ವೈಜನಾಥ ವಾಲಿ, ಸಂತೋಷ, ಶಿವಪುತ್ರ, ಮುಜಾಮಿಲ್, ದತ್ತು, ದೇವೇಂದ್ರ ಇತರರಿದ್ದರು.