ಚನ್ನರಾಯಪಟ್ಟಣ: ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಾಣ ಮಾಡಲಾಗಿರುವ ಜಿಮ್‌ನ ಸದ್ಭಳಕೆಯಿಂದ ಕ್ರೀಡಾಪಟುಗಳು ಹೆಚ್ಚಿನ ದೈಹಿಕ ಕಸರತ್ತಿನೊಂದಿಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ವ್ಯಾಯಾಮ ಶಾಲೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಅಗತ್ಯ ಮೂಲ ಸೌಲಭ್ಯಕ್ಕಾಗಿ ಪೌರಡಳಿತ ಸಚಿವರಿಗೆ 5 ಕೋಟಿ ರೂ. ಅನುದಾನದ ಬಿಡುಗಡೆಗೆ ಆಗ್ರಹಿಸಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಆ ಪೈಕಿ 3 ಕೋಟಿ ರೂ.ಗಳನ್ನು ಪುರಭವನ ನಿರ್ಮಾಣಕ್ಕಾಗಿ, ಸಾಹಿತ್ಯ ಭವನ ನಿರ್ಮಾಣಕ್ಕಾಗಿ 50 ಲಕ್ಷ ರೂ. ಮತ್ತು 25 ಲಕ್ಷ ರೂ. ವೆಚ್ಚದಲ್ಲಿ ಪುನೀತ್ ರಾಜಕುಮಾರ್ ಉದ್ಯಾನ ಹಾಗೂ ಕ್ರೀಡಾಂಗಣದ ಅಭಿವೃದ್ಧಿಗಾಗಿ ಎಸ್‌ಎಫ್‌ಸಿ ಅನುದಾನದಲ್ಲಿ 1.25 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗಿದೆ. ತಾಲೂಕು ಕ್ರೀಡಾಂಗಣದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ, ಸುಸಜ್ಜಿತವಾದ ಶೌಚಗೃಹವನ್ನು ನಿರ್ಮಾಣ ಮಾಡಲಾಗುವುದು ಎಂದರು.
ನಿರ್ಮಿತಿ ಕೇಂದ್ರದ ಮೂಲಕ ವ್ಯಾಯಾಮ ಶಾಲೆ ನಿರ್ಮಿಸಲಾಗಿದ್ದು, ಹಳೆಯ ಕಟ್ಟಡದಲ್ಲಿ ಸಂಪೂರ್ಣವಾಗಿ ಉಪಕರಣಗಳು ಇಲ್ಲದಿರುವುದರಿಂದ ಅಗತ್ಯವಾದ ಎಲ್ಲ ಉಪಕರಣಗಳನ್ನು ಅಳವಡಿಸಿ ಸುಸಜ್ಜಿತವಾದ ವ್ಯಾಯಾಮ ಶಾಲೆ ನಿರ್ಮಾಣ ಮಾಡಲಾಗಿದೆ. ಯುವಜನ ಕ್ರೀಡಾಧಿಕಾರಿಯ ಮೇಲ್ವಿಚಾರಣೆಯಲ್ಲಿ ನಿರ್ವಹಣೆಗಾಗಿ ದೈಹಿಕ ಶಿಕ್ಷಕರನ್ನು ನೇಮಿಸಿ ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಲಾಗುವುದು ಎಂದರು.
ಜಿಮ್‌ನ ನಿರ್ವಹಣೆಗಾಗಿ ತಾಲೂಕು ಪಂಚಾಯಿತಿ ಇಒ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಯೊಂದಿಗೆ ಸಮಾಲೋಚಿಸಿ ಕನಿಷ್ಠ ಶುಲ್ಕ ನಿಗದಿಪಡಿಸಲಾಗುವುದು. ಜಿಮ್‌ಗೆ ಬರುವವರ ಸದಸ್ಯತ್ವ ಮಾಡಿಕೊಂಡು, ಇದು ನಮ್ಮದು ಎಂಬ ಭಾವನೆಯಲ್ಲಿ ಪಟ್ಟಣದ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಗಣೇಶ್, ಮಹೇಶ್, ಮುಖಂಡರಾದ ಕಗ್ಗೆರೆ ಬಾಬು, ರವಿ ಕುಂಬಾರಹಳ್ಳಿ ಇತರರು ಇದ್ದರು.