ರಾಯಬಾಗ:ರಾಜ್ಯಾದ್ಯಂತ ಕರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಸರ್ಕಾರ ಕರೊನಾ ನಿಯಂತ್ರಣಕ್ಕಾಗಿ ಕಠಿಣ ಮಾರ್ಗಸೂಚಿ ಅನುಸರಿಸಲು ಆದೇಶ ನೀಡುತ್ತಿದ್ದರೂ, ತಾಲೂಕಿನಲ್ಲಿ ಮಾತ್ರ ಕೋವಿಡ್-19 ತಡೆಗಟ್ಟಲು ತಾಲೂಕಾಡಳಿತ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಪ್ರಜ್ಞಾವಂತ ನಾಗರಿಕರನ್ನು ಕೆರಳಿಸಿದೆ.
ರಾಯಬಾಗ ಪಟ್ಟಣದಲ್ಲಿ ಸೋಮವಾರ ವಾರದ ಸಂತೆಯಲ್ಲಿ ಸುತ್ತಮುತ್ತಲಿನ ಸಾವಿರಾರು ಜನ ಸೇರಿದ್ದರು. ಕೋವಿಡ್ 2ನೇ ಅಲೆ ಹೆಚ್ಚುತ್ತಿರುವ ಈ ವೇಳೆಯಲ್ಲಿ ಸಂತೆಯಲ್ಲಿ ದೈಹಿಕ ಅಂತರ ಇಲ್ಲದೇ ಜನರು ಕಿಕ್ಕಿರಿದು ಸೇರಿ ಸಂತೆ ಮಾಡುತ್ತಿರುವ ದೃಶ್ಯ ಎಲ್ಲೆಡೆ ಕಾಣುತ್ತಿದೆ. ಬಹುತೇಕ ವ್ಯಾಪಾರಸ್ಥರು ಮತ್ತು ಜನರು ಮಾಸ್ಕ ಧರಿಸದೆ ಸಂತೆಯಲ್ಲಿ ಓಡಾಡುತ್ತಿರುವುದು ಆತಂಕ ಮೂಡಿಸಿದೆ.
ಕಳೆದ ತಿಂಗಳು ತಾಲೂಕಿನ ಬಾವನವಸೌಂದತ್ತಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದರಿಂದ ತಾಲೂಕಿನ ಜನರಲ್ಲಿ ಆತಂಕ ಮೂಡಿಸಿತ್ತು. ಈಗ ಮತ್ತೆ ದಿನಾಲೂ ಕರೊನಾ ಪಾಸಿಟಿವ್ ಪ್ರಕರಣಗಳು ಬರುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಿಸಿದೆ. ತಾಲೂಕಾಡಳಿತ, ಪೊಲೀಸ್ ಇಲಾಖೆ ಮತ್ತು ಪಟ್ಟಣ ಪಂಚಾಯತ ಅಧಿಕಾರಿಗಳು ಕೋವಿಡ್ 2ನೇ ಅಲೆ ನಿಯಂತ್ರಿಸಲು ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದಿರುವುದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕಡ್ಡಾಯವಾಗಿ ಮಾಸ್ಕ್ ಮತ್ತು ದೈಹಿಕ ಅಂತರ ಕಾಪಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ತ್ವರಿತಗತಿಯಲ್ಲಿ ಆಗಬೇಕಿದೆ.