ಪಿರಿಯಾಪಟ್ಟಣ: ನಮ್ಮ ದೇಹ ಆರೋಗ್ಯವಾಗಿರುವುದರ ಜತೆಗೆ ಮನಸ್ಸಿನ ಆರೋಗ್ಯವೂ ಅಷ್ಟೇ ಉತ್ತಮವಾಗಿರಬೇಕು ಎಂದು ಪಟ್ಟಣದ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜೆ.ಶ್ವೇತಾ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನಸಿಕ ಅರೋಗ್ಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಬ್ಬ ವ್ಯಕ್ತಿ ಮಾನಸಿಕವಾಗಿ ಅನಾರೋಗ್ಯ ಹೊಂದಿದ್ದರೆ ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಒತ್ತಡದಲ್ಲಿದ್ದು ಜೀವನದಲ್ಲಿ ಸಮತೋಲನವನ್ನು ಕಳೆದುಕೊಳ್ಳುತ್ತಾರೆ ಎಂದರು. ನಾವು ನಮ್ಮ ಮನಸ್ಸನ್ನು ಸ್ಥಿಮಿತವಾಗಿ ಇಟ್ಟುಕೊಳ್ಳಬೇಕಿದ್ದಲ್ಲಿ ಪ್ರತಿನಿತ್ಯವೂ ಚಟುವಟಿಕೆಯಿಂದ ಇರಬೇಕು ಎಂದರು.
ಪ್ರತಿನಿತ್ಯ ವಾಕಿಂಗ್ ಮಾಡುವುದು, ಸಕ್ರಿಯವಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು, ಯೋಗಾಭ್ಯಾಸ ಮತ್ತು ಧ್ಯಾನ ಮಾಡುವುದರಿಂದ ಹೆಚ್ಚು ಸಹಾಯವಾಗಲಿದೆ ಎಂದರು. ಪ್ರಮುಖವಾಗಿ ನಮ್ಮ ಜೀವನದಲ್ಲಿ ಶಿಸ್ತುಬದ್ಧ ಶೈಲಿ ಅಳವಡಿಸಿಕೊಂಡಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ನಿಖರತೆ ಕಾಣಬಹುದಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಕೆ.ಶ್ರೀನಿವಾಸ್ ಮಾತನಾಡಿ, ಮಾನಸಿಕ ಕಾಯಿಲೆ ಸಂಪೂರ್ಣವಾಗಿ ಗುಣಪಡಿಸಬಹುದಾಗಿದ್ದು, ಸಮಯಕ್ಕೆ ಸರಿಯಾಗಿ ಗುರುತಿಸಿ ಚಿಕಿತ್ಸೆ ನೀಡಬೇಕು ಎಂದರು. ನಿಯಮಿತವಾಗಿ ಔಷಧ ಸೇವನೆ , ಚಿಕಿತ್ಸೆ ಮತ್ತು ಸಕಾರಾತ್ಮಕ ವಾತಾವರಣದಿಂದ ವ್ಯಕ್ತಿಯು ಸಾಮಾನ್ಯ ಜೀವನವನ್ನು ನಡೆಸಬಹುದು ಎಂದರು.
ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 30,157 ಮನೋರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ, 1,031 ಮಂದಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಲಾಗಿದೆ ಎಂದರು.
ತಾಲೂಕು ಅರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ ಮಾತನಾಡಿ, ನಿರಂತರ ಮಾನಸಿಕ ಒತ್ತಡ, ಆತಂಕ ಮತ್ತು ನಿದ್ರಾಹೀನತೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದರು. ಮಿತವಾದ ಆಹಾರ ಸೇವನೆ, ನಿಗದಿತ ಸಮಯದಲ್ಲಿ ನಿದ್ರೆ ಮಾಡುವುದರಿಂದ ನಮ್ಮ ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಉಂಟಾಗಲಿದೆ ಎಂದರು. ಮೊಬೈಲ್ ಹಾಗೂ ಟಿವಿ ನೋಡುವುದನ್ನು ಕಡಿಮೆ ಮಾಡಬೇಕು ಹಾಗೂ ಒಳ್ಳೆಯ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಕೆ.ಶಂಕರ. ಖಜಾಂಚಿ ಹರೀಶ್, ಶ್ರೀನಿವಾಸ್ ಪ್ರಾಂಶುಪಾಲ ನಂಜುಂಡಸ್ವಾಮಿ, ಉಪನ್ಯಾಸಕರಾದ ಸಿ.ಆರ್.ವಿಶ್ವನಾಥ್, ಸಾಗರ್, ರೂಪಾ, ಮಂಜುನಾಥ್, ಸ್ವಾತಿ, ಡಾ.ಶೈಲಶ್ರೀ, ಆರೋಗ್ಯ ಇಲಾಖೆಯ ರೀನಾ ಮತ್ತು ಮಹಾದೇವ ಇದ್ದರು.