ಅಥಣಿ ಗ್ರಾಮೀಣ: ದೇಹವು ದೇವಾಲಯವಾಗಬೇಕು. ದುಶ್ಚಟ, ದುರ್ಗುಣಗಳಿಂದ ದೂರವಿದ್ದರೆ ಮಾತ್ರ ಮಾಡಿದ ಪೂಜೆ, ಉಪವಾಸ, ಪ್ರಾರ್ಥನೆ ಲ ನೀಡುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ದಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮತ್ತು ಲಿಂ.ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗುಡಿ ಕಟ್ಟಿ ಮೂರ್ತಿ ಇಟ್ಟರೆ ಕೆಲಸ ಮುಗಿಯುವುದಿಲ್ಲ. ಆ ಗುಡಿಗೆ ಕಲಶವಿಟ್ಟಾಗ ಪೂರ್ಣವಾಗುತ್ತದೆ. ಕಲಶವು ಭಕ್ತ ಮತ್ತು ಭಗವಂತನ ನಡುವೆ ಕೊಂಡಿ ಎಂದರು.
ಎಲ್ಲ ಭಕ್ತರ ಸಹಕಾರ, ಸಹಾಯ, ದಾನದ ಪ್ರತಿಲವಾಗಿ ಇಂದು ಭವ್ಯವಾದ ದೇವಾಲಯ ನಿರ್ಮಾಣಗೊಂಡಿದೆ. ಅಡಹಳ್ಳಟ್ಟಿ ಗ್ರಾಮದ ದಾನಮ್ಮದೇವಿ ಮಹಿಳಾ ಸಮಿತಿಯು ಎರಡು ವರ್ಷಗಳಿಂದ ಶ್ರಮಿಸಿ ಸುಂದರವಾದ ದೇವಾಲಯ ನಿರ್ಮಿಸಿ ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ, ಮಹಿಳೆ ನೇತೃತ್ವ ವಹಿಸಿದರೆ ಪರಿಪೂರ್ಣ ಕೆಲಸ ಮಾಡಬಲ್ಲಳು ಎಂದು ಸಾಧಿಸಿ ತೋರಿಸಿದ್ದಾರೆ. ತಾವೆಲ್ಲರೂ ಶ್ರದ್ಧೆ, ಭಕ್ತಿ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಆರೋಗ್ಯ ಮತ್ತು ನೆಮ್ಮದಿಯಿಂದ ಬದುಕಬೇಕು ಎಂದರು.
ಕಕಮರಿ ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ ಮಾತನಾಡಿ, ಲಿಂ.ಸಿದ್ಧೇಶ್ವರ ಶ್ರೀಗಳು ನಡೆ ಮತ್ತು ನುಡಿ ಒಂದೇ ಇಟ್ಟುಕೊಂಡು ಬದುಕು ಸಾಗಿಸಿದವರು. ಪ್ರಕೃತಿಯಲ್ಲಿ ಪರಮಾತ್ಮನಿದ್ದಾನೆ ಎಂದು ತಿಳಿಸಿಕೊಟ್ಟರು. ಸಮಾಜದ ಅಂಕು-ಡೊಂಕುಗಳನ್ನು ನವಿರಾಗಿ ತಿಳಿಸಿದವರು. ಸರಳ ಮತು ಸಾತ್ವಿಕತೆಯಿಂದ ವಿಶ್ವದ ಮನಸ್ಸನ್ನು ಗೆದ್ದವರು. ಸುಮಾರು 10 ವರ್ಷಗಳ ಕಾಲ ಅವರ ಸೇವೆ ಮಾಡುವ ಭಾಗ್ಯ ದೊರೆತಿರುವುದು ನನ್ನ ಪುಣ್ಯ. ಅವರು ನಮ್ಮೊಂದಿಗೆ ಇಲ್ಲವಾದರೂ ಅವರು ಹಾಕಿಕೊಟ್ಟ ತತ್ತ್ವಾದರ್ಶಗಳು ನಮ್ಮೊಂದಿಗೆ ಇವೆ ಎಂದರು.
ಕೊಣ್ಣೂರಿನ ಡಾ.ಶಿವಪ್ರಭು ಶಿವಾಚಾರ್ಯ ಸ್ವಾಮೀಜಿ, ಗುಡ್ಡಾಪುರದ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಜಮಖಂಡಿಯ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿದರು. ಅದಕ್ಕೂ ಮುನ್ನ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ನಿಜಗುಣ ದೇವಸ್ಥಾನದಿಂದ ದಾನಮ್ಮದೇವಿ ದೇವಸ್ಥಾನವರೆಗೆ ಕುಂಭಾರತಿಯೊಂದಿಗೆ ಸ್ವಾಗತಿಸಲಾಯಿತು.
ಬಳಿಕ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನೆರವೇರಿಸಲಾಯಿತು. ಕೆಎಎಸ್ ಅಧಿಕಾರಿ ಮಲಗೌಡ ಝರೆ ಕಾರ್ಯಕ್ರಮ ಉದ್ಘಾಟಿಸಿದರು, ಮರುಳಸಿದ್ಧ ಸ್ವಾಮೀಜಿ, ಮಲ್ಲಪ್ಪ ಶರಣರು, ಚಿದಾನಂದ ಸವದಿ, ಡಾ.ಜ್ಯೋತಿ ಕುಮಠಳ್ಳಿ, ಗಜಾನನ ಮಂಗಸೂಳಿ, ಈರಗೌಡ ಪಾಟೀಲ, ಘಟಿವಾಳಪ್ಪ ಗುಡ್ಡಾಪುರ, ಶ್ರೀಶೈಲ ತಾಂವಶಿ, ಚಿದಾನಂದ ಮಠಪತಿ, ಭೀಮು ಕೇರಿ, ನಿಂಗಯ್ಯ ಮಠಪತಿ, ವಿಜಯ ಕಲಮಡಿ, ಸುನೀಲ ಕೆಂಚಣ್ಣವರ ಇತರರು ಉಪಸ್ಥಿತರಿದ್ದರು. ಶಿವು ಗುಡ್ಡಾಪುರ ಸ್ವಾಗತಿಸಿದರು. ಸದಾನಂದ ಮಾಡಗ್ಯಾಳ ನಿರೂಪಿಸಿ, ವಂದಿಸಿದರು.