ಜಿಲ್ಲೆ

ದೇಸೀ ಕ್ರೀಡೆಗಳಿಗೆ ಮನ್ನಣೆ ಅಗತ್ಯ

ಕೊಳ್ಳೇಗಾಲ: ದೇಸೀ ಕ್ರೀಡೆಯಾದ ಕುಸ್ತಿಗೆ ಹೆಚ್ಚಿನ ಮನ್ನಣೆ ಅಗತ್ಯ ಎಂದು ಶಾಸಕ ಎನ್.ಮಹೇಶ್ ಹೇಳಿದರು. ಪಟ್ಟಣದ ಎಂಜಿಎಸ್‌ವಿ ಕಿರಿಯ ಕಾಲೇಜು ಮೈದಾನದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಪ್ರಗತಿಪರ ಒಕ್ಕೂಟ ಆಯೋಜಿಸಿದ್ದ ಅಂತಾರಾಜ್ಯ ನಾಡ ಕುಸ್ತಿ ಹೊನಲು ಬೆಳಕಿನ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಡ ಕುಸ್ತಿ ದೇಶದ ಮೂಲ ಕ್ರೀಡೆಯಾಗಿದೆ. ರಾಜ ಮಹಾರಾಜರು ಕಲಿಯುತ್ತಿದ್ದ 64 ವಿದ್ಯೆಗಳ ಪೈಕಿ ಕುಸ್ತಿ ವಿಶೇಷ ವಿದ್ಯೆಯಾಗಿದೆ. ಇಂತಹ ಪಂದ್ಯ ಕೊಳ್ಳೇಗಾಲದಲ್ಲಿ ನಡೆದಿರುವುದು ಇತಿಹಾಸ ನಿರ್ಮಿಸಿದೆ ಎಂದರು. ನಮ್ಮ ಪರಂಪರೆಯ ಪ್ರತೀಕವಾದ ಕುಸ್ತಿ ಪಂದ್ಯ ಯುವಕರಿಗೆ ಪ್ರೇರಣೆಯಾಗಲಿದೆ. ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಸ್ಫೂರ್ತಿಯಾಗಲಿದೆ ಎಂದರು.

ಸಂಭ್ರಮಿಸಿದ ಜನ: ಪಂದ್ಯ ಪ್ರಾರಂಭವಾಗುತ್ತಿದಂತೆ ತಂಡೋಪತಂಡವಾಗಿ ಆಗಮಿಸಿದ ಜನರು ಪಂದ್ಯ ವೀಕ್ಷಣೆಗೆ ಹಾಕಲಾಗಿದ್ದ ಆಸನಗಳ ಮೇಲೆ ಕುಳಿತು ಕೊನೆಯ ತನಕವೂ ವೀಕ್ಷಿಸಿದರು. ದಟ್ಟಣೆ ಹೆಚ್ಚಾದಾಗ ಕೆಲವರು ನಿಂತುಕೊಂಡೇ ಪಂದ್ಯ ವೀಕ್ಷಣೆ ಮಾಡಿದರು.