ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಸತ್ಕರಿಸಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಸಂಸದ ಸಾಗರ್ ಖಂಡ್ರೆ, ಶಾಸಕರಾದ ಪ್ರಭು ಚವ್ಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಪ್ರಮುಖರಾದ ಪ್ರಕಾಶ ಖಂಡ್ರೆ, ಗುರುನಾಥ ಕೊಳ್ಳುರ್ ಇತರರಿದ್ದರು. 
ಜಿಲ್ಲೆ

ದೇಶಾದ್ಯಂತ ಬಸವ ಜಯಂತ್ಯುತ್ಸವಕ್ಕೆ ಪ್ರಯತ್ನ

ಭಾಲ್ಕಿ: ಜಗತ್ತಿಗೆ ಸಮಾನತೆ ಸಂದೇಶ ಸಾರಿದ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಆಚರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಬಸವತತ್ವವನ್ನು ಉಸಿರಾಗಿಸಿಕೊಂಡಿರುವ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಮನವಿ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸತ್ ಸ್ಪೀಕರ್‌ಗೆ ಪತ್ರ ಬರೆದು ಬಸವ ಜಯಂತಿಯನ್ನು ಕೇಂದ್ರದಿಂದ ಆಚರಿಸಲು ಮನವಿ ಮಾಡಲಾಗಿತ್ತು. ಅದರಂತೆ ಈ ಬಾರಿ ಸಂಸತ್‌ನಲ್ಲಿ ಆಚರಿಸಲಾಗಿದೆ. ಬರುವ ದಿನಗಳಲ್ಲಿ ದೇಶಾದ್ಯಂತ ಆಚರಿಸಲು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ನಾಲ್ಕು ದಶಕದಿಂದ ಹಿರೇಮಠ ಸಂಸ್ಥಾನಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಪೂಜ್ಯರ ಪರಿಶ್ರಮದಿಂದ ಇದೀಗ ಹಿರೇಮಠ ದೊಡ್ಡದಾಗಿ ಬೆಳೆದಿದೆ. ಈ ಭಾಗದಲ್ಲಿ ಶ್ರೀಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಅದ್ಭುತ ಕೊಡುಗೆ ನೀಡುತ್ತಿದ್ದಾರೆ. ಹೆತ್ತವರಿಗೆ ಬೇಡವಾದ ಮಕ್ಕಳನ್ನು ಅನ್ನ-ಆಶ್ರಯ, ಶಿಕ್ಷಣ ಕಲ್ಪಿಸಿ ದೇವಸ್ವರೂಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾನು ಅನುಭವ ಮಂಟಪ ನೋಡಲಿಲ್ಲ. ಬಸವಣ್ಣನವರನ್ನು ಕಂಡಿಲ್ಲ. ಆದರೆ ಪೂಜ್ಯರಲ್ಲಿನ ಸಮಾನತೆ ತತ್ವ ಮತ್ತು ಬಸವಣ್ಣನವರ ವಿಚಾರಾಧಾರೆಗಳಿಂದ ಪ್ರೇರಣೆಯಾಗಿದ್ದೇನೆ ಎಂದು ಹೇಳಿದರು.

ರಾಜ್ಯಾದ್ಯಂತ ಹಲವು ಮಠಗಳನ್ನು ಸುತ್ತಿದ್ದೇನೆ. ಆದರೆ ಹಿರೇಮಠ ಸಂಸ್ಥಾನದ ಸಮಾಜ ಸೇವೆ ಎಲ್ಲ ಮಠಗಳಿಂದ ವಿಭಿನ್ನವಾಗಿದೆ. ನನ್ನ ಏಳಿಗೆಯಲ್ಲಿ ಸಿದ್ಧಗಂಗೆ ಮಠದ ಕೊಡುಗೆ ದೊಡ್ಡದಿದೆ. ಅದರೊಂದಿಗೆ ಭಾಲ್ಕಿ ಮಠದ ಆಶೀರ್ವಾದವೂ ಬೆನ್ನಿಗಿದೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ನಾನು ಬಸವಣ್ಣನವರು, ಮಠಾಧೀಶರ ಆಶೀರ್ವಾದದಿಂದ ಸಂಸತ್ ಸದಸ್ಯ, ಕೇಂದ್ರ ಸಚಿವನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಕೇಂದ್ರದಿಂದ ಆಚರಿಸುವಂತೆ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಅದರಂತೆ ಸಂಸತ್‌ನಲ್ಲಿ ಜಯಂತಿ ಆಚರಿಸಿರುವುದು ಸಂತಸದ ವಿಷಯದ ಎಂದರು.

ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ, ಶಾಸಕರಾದ ಪ್ರಭು ಚವ್ಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ್, ಎಂಎಲ್‌ಸಿ ಮಾರುತಿರಾವ ಮುಳೆ, ಮಾಜಿ ಸಂಸದ ಡಾ.ಉಮೇಶ ಜಾಧವ್, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಹಿರಿಯ ಉದ್ಯಮಿ ಗುರುನಾಥ ಕೊಳ್ಳುರ್, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನಿರ್ದೇಶಕ ಶಶಿಧರ ಕೋಸಂಬೆ, ಆಡಳಿತಾಧಿಕಾರಿ ಮೋಹನರಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಇತರರಿದ್ದರು. ಮಧುಕರ ಗಾವಂಕರ್ ನಿರೂಪಣೆ ಮಾಡಿ ವಂದಿಸಿದರು.

ದೇಶಾದ್ಯಂತ ಗೌತಮ ಬುದ್ಧ, ಮಹಾವೀರ ಜಯಂತಿ ಆಚರಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರದಿಂದ ಬಸವ ಜಯಂತಿ ಆಚರಿಸಲು ಪಕ್ಷಾತೀತವಾಗಿ ಎಲ್ಲರೂ ಮುತುವರ್ಜಿ ವಹಿಸುವ ಅಗತ್ಯವಿದೆ.

| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು

ಕೇಂದ್ರ ಸಚಿವ ವಿ.ಸೋಮಣ್ಣನವರ ರಾಜಕೀಯ, ಸಾಮಾಜಿಕ ಕ್ಷೇತ್ರದ ಬೆಳವಣಿಗೆಯಲ್ಲಿ ಸಿದ್ಧಗಂಗಾ ಶ್ರೀಮಠದ ಕೊಡುಗೆ ದೊಡ್ಡದಿದೆ. ಸಚಿವರಾಗಿ ರಾಷ್ಟçದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ದುರ್ಬಲರು, ನೋಂದವರ ಪಾಲಿನ ಆಶ್ರಯದಾತರಾಗಿದ್ದಾರೆ.

| ಶ್ರೀ ಗುರುಬಸವ ಪಟ್ಟದ್ದೇವರು

ಹಿರೇಮಠ ಸಂಸ್ಥಾನ ಭಾಲ್ಕಿ