:ಮೈಸೂರು: ಬಡವರ ಕಲ್ಯಾಣವೇ ನಮ್ಮ ಪಕ್ಷದ ಮುಖ್ಯ ಆದ್ಯತೆಯಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಚಿವರೂ ಆದ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ರಾಮದಾಸ್ ಅಠವಳೆ ಹೇಳಿದರು.
ನಗರದ ಬನ್ನಿಮಂಟಪದ ಮಿಲೇನಿಯಂ ವೃತ್ತದ ಬಳಿ ಇರುವ ಕ್ಯಾಥೋಲಿಕ್ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಿದ್ದ ಪಕ್ಷದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.
ದೇಶಾದ್ಯಂತ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗಿದೆ. ನಾನು ಕೂಡ ದೇಶದ ಅನೇಕ ರಾಜ್ಯಗಳಲ್ಲಿ ಸಂಚರಿಸಿ ದಲಿತ ಸಮಾಜದ ಜನರನ್ನು ಜಾಗೃತಗೊಳಿಸುತ್ತಿದ್ದೇನೆ. ಆ ಮೂಲಕ ಪಕ್ಷದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಕೈಜೋಡಿಸಬೇಕು ಎಂದರು.
ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಲಾಗುವುದು. ಇದುವೇ ಪಕ್ಷದ ಮುಖ್ಯ ಕಾರ್ಯಸೂಚಿಯಾಗಿದೆ ಎಂದರು.
ಜಾತಿ ಆಧಾರದ ಮೇಲೆ ಮೀಸಲು ನೀಡಿಲ್ಲ. ಜಾತಿಗಳ ಸಾಮಾಜಿಕ, ಶೈಕ್ಷಣಿಕ ಹಿಂದುಳಿವಿಕೆಯನ್ನು ಪರಿಗಣನೆ ತೆಗೆದುಕೊಳ್ಳಲಾಗಿದೆ. ದಲಿತರು ಸೇರಿದಂತೆ ಮಹಿಳೆ ಮೇಲೆ ಅನ್ಯಾಯವಾದರೆ ಪಕ್ಷದ ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕು. ಹೋರಾಟ ನಡೆಸುವ ಮೂಲಕ ಸಂತ್ರಸ್ತರಿಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದರು.
ದಲಿತರು ಮತ್ತು ಹಿಂದುಳಿದವರಿಗೆ ಮೀಸಲು ನೀಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಅವರ ಮೇಲೆ ನಮಗೆ ವಿಶೇಷ ಅಭಿಮಾನ ಮತ್ತು ಗೌರವ ಇದೆ ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಕಲ್ಯಾಣ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ರಾಜ್ಯದಲ್ಲಿ ಪಿಎಸ್‌ಐ ಹಗರಣದ ಬಗ್ಗೆ ಮಾಹಿತಿ ಸಿಕ್ಕಿದ್ದು, ಹಗರಣದಿಂದ ಸಾಕಷ್ಟು ಪ್ರತಿಭಾವಂತರಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಸಿಗುವಂತೆ ಮಾಡಲು ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.
ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಮುಖಂಡರಾಧ ಎನ್.ಮುನಿರಾಜು, ಸುರೇಶ್ ಇನ್ನಿತರರು ಇದ್ದರು.