ಜಿಲ್ಲೆ

'ದೇಶಭಕ್ತಿಗೀತೆಯಿಂದ ಐಕ್ಯಭಾವ ಜಾಗೃತಿ'

ಮೈಸೂರು: ದೇಶಭಕ್ತಿ ಗೀತೆಗಳನ್ನು ಕೇಳುವುದು ಹಾಗೂ ಹಾಡುವುದರಿಂದ ಐಕ್ಯಭಾವ ಇಮ್ಮಡಿಗೊಳ್ಳುತ್ತದೆ ಎಂದು ನಿವೃತ್ತ ಕರ್ನಲ್ ರವಿ ಹೇಳಿದರು.
ಸಖಿ ಫೌಂಡೇಶನ್ ಮತ್ತು ಸೂರ್ಯ ಚಾರಿಟಬಲ್ ಟ್ರಸ್ಟ್‌ನಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಜೈಹಿಂದ್-ದೇಶಭಕ್ತಿಗೀತೆಗಳ ಗಾಯನ ಸ್ಪರ್ಧೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶ, ನಮ್ಮ ಹೆಮ್ಮೆ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು. ತ್ರಿವರ್ಣ ಧ್ವಜವು ಭಾವೈಕ್ಯತೆಯ ಸಂಕೇತವಾಗಿದೆ. ಮುಗಿಲೆತ್ತರದಲ್ಲಿ ಹಾರಾಡುವ ಧ್ವಜವನ್ನು ಕಂಡಾಗ ಎದೆಯುಬ್ಬಿಸಿ ವಂದಿಸುವ ಭಾವ ಪ್ರತಿ ಭಾರತೀಯರಲ್ಲೂ ಗೋಚರಿಸುತ್ತದೆ ಎಂದರು.
ದೇಶ ಕಾಯುವ ಯೋಧರು ತಮ್ಮೆಲ್ಲ ಭಾವನೆಗಳನ್ನು ತಿರಂಗದಲ್ಲೇ ಕಾಣುತ್ತಾರೆ. ಒಲಿಂಪಿಕ್‌ನಂತಹ ಕ್ರೀಡೆಗಳಲ್ಲಿ ಗೆದ್ದಾಗ ಹೊರಹೊಮ್ಮುವ ರಾಷ್ಟಗೀತೆ ರೋಮಾಂಚನಗೊಳಿಸುತ್ತದೆ ಎಂದರು.
ಸಮಾಜ ಸೇವಕರಾದ ರಘುರಾಂ ವಾಜಪೇಯಿ ಮಾತನಾಡಿ, ಇಂದಿನ ಮಕ್ಕಳು ದೇಶಾಭಿಮಾನ ಮೈಗೂಡಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ದೇಶಭಕ್ತಿಗೀತೆ ಹೇಳುವುದರ ಜತೆಗೆ ಬಹುಮಾನವನ್ನೂ ಗಳಿಸಿಕೊಂಡು ಹೋಗುವುದರಿಂದ ಮಕ್ಕಳಲ್ಲಿ ಮತ್ತಷ್ಟು ದೇಶಪ್ರೇಮ ಹೆಚ್ಚುತ್ತದೆ ಎಂದರು.
ಶಾಲಾ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕ ವಿಭಾಗದಲ್ಲಿ ದೇಶಭಕ್ತಿಗೀತೆ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. ಸಖಿ ಫೌಂಡೇಶನ್ ಮತ್ತು ಸೂರ್ಯ ಚಾರಿಟಬಲ್ ಟ್ರಸ್ಟ್ ಸಂಸ್ಥಾಪನಾ ಕಾರ್ಯದರ್ಶಿ ಗಾಯತ್ರಿ ಸುಂದರೇಶ್, ಅಧ್ಯಕ್ಷ ಎಚ್.ಆರ್.ಸುಂದರೇಶನ್ ಇತರರು ಇದ್ದರು.