ಜಿಲ್ಲೆ

ದೇಶಭಕ್ತಿ ಹೆಚ್ಚಿಸಿದ ತಿರಂಗ ರ‌್ಯಾಲಿ ; ವಿವೇಕಾನಂದ, ಸುಭಾಷ್ ಚಂದ್ರಬೋಸ್ ಜಯಂತಿ ಆಚರಣೆ

ತುಮಕೂರು : ಸ್ವಾಮಿ ವಿವೇಕಾನಂದರ 158ನೇ ಹಾಗೂ ಸುಭಾಷ್ ಚಂದ್ರಬೋಸ್‌ರವರ 125ನೇ ಜನ್ಮ ಜಯಂತಿ ಅಂಗವಾಗಿ ನಗರ ಎಬಿವಿಪಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ತಿರಂಗ ರ‌್ಯಾಲಿಯ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್ ಸೋಮವಾರ ತಿರಂಗರ‌್ಯಾಲಿಗೆ ಚಾಲನೆ ನೀಡಿದರು.

ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನಿಂದ ಪ್ರಾರಂಭವಾದ ತಿರಂಗ ರ‌್ಯಾಲಿಯು ಎಸ್‌ಐಟಿ ಮುಖ್ಯರಸ್ತೆ ಮೂಲಕ ಕೆಂಪಣ್ಣ ಅಂಗಡಿ ಸರ್ಕಲ್, ನಂತರ ಧೋಬಿಘಾಟ್ ರಸ್ತೆ ಮುಖಾಂತರ ಬಿ.ಎಚ್.ರಸ್ತೆ ಹಾಗೂ ಶಿವಕುಮಾರ ಸ್ವಾಮೀಜಿ ವೃತ್ತದಿಂದ ವಿಶ್ವವಿದ್ಯಾಲಯದ ಪಕ್ಕದ ರಸ್ತೆಯಲ್ಲಿ ಸಂಪನ್ನಗೊಂಡಿತು. ನಂತರ ಸಾರ್ವಜನಿಕ ವಿವೇಕ ಯುವ ಸಮಾವೇಶ ನಡೆಯಿತು.

ಯುವ ಸಮೂಹದ ಶಕ್ತಿಯನ್ನು ಗುರುತಿಸಿ ಅದನ್ನು ರಾಷ್ಟ್ರನಿರ್ಮಾಣದ ದಿಕ್ಕಿನಲ್ಲಿ ಹರಿಸಿದ ವಿವೇಕಾನಂದರ ಆದರ್ಶ ಇಂದಿಗೂ ಪ್ರಸ್ತುತ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ ಹೇಳಿದರು.

ಪ್ರಪಂಚ ಕಂಡಂತಹ ಅದ್ಭುತ ಚಿಂತಕ ಸ್ವಾಮಿ ವಿವೇಕಾನಂದರ ರಾಜಯೋಗ, ಭಕ್ತಿಯೋಗ, ಜ್ಞಾನಯೋಗ, ಆಧ್ಯಾತ್ಮಿಕತೆ ಬಗ್ಗೆ ಚಿಕ್ಕವಯಸ್ಸಿನಲ್ಲೇ ಪಾಂಡಿತ್ಯ ಗಳಿಸಿಕೊಂಡಿದ್ದರು. ದೇಶ ವಿದೇಶಗಳ ನಾನಾ ಭಾಗಗಳಲ್ಲಿ ಸಂಚರಿಸಿ ತಮ್ಮ ಉಪನ್ಯಾಸಗಳ ಮೂಲಕ ವೇದದ ವಾಣಿಗಳನ್ನು ಬಿತ್ತುತ್ತಾ ನಮ್ಮ ಧರ್ಮದ ಶ್ರೇಷ್ಠತೆ ಮತ್ತು ಘನತೆಯನ್ನು ಎತ್ತಿಹಿಡಿದರು. ಶಕ್ತಿ , ಸ್ವಾಭಿಮಾನ, ಸ್ವಾವಲಂಬನೆ, ಸೇವೆ, ಆತ್ಮವಿಶ್ವಾಸ, ರಾಷ್ಟ್ರಭಕ್ತಿ ವಿಚಾರಗಳು ಮೂಲಕ ಸಮಾಜವನ್ನು ವಿಶೇಷವಾಗಿ ಯುವಶಕ್ತಿಯನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಕ್ರಿಯಾಶೀಲರಾಗಿ ರೂಪುಗೊಳ್ಳಲು ಪ್ರೇರಣೆ ನೀಡಿದ ಮಹಾಪುರಷ ವಿವೇಕಾನಂದ ಎಂದು ಬಣ್ಣಿಸಿದರು.

ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲದಯಾನಂದ್ ಅಧ್ಯಕ್ಷತೆವಹಿಸಿದ್ದರು. ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್ ಸ್ವಾಗತಿಸಿದರು. ನಗರ ಸಂಘಟನಾ ಕಾರ್ಯದರ್ಶಿ ಶಿವಕುಮಾರ್‌ಗೌಡ, ರಾಧಾಕೃಷ್ಣ, ಜೀವನ್, ಸಂತೋಷ್, ಮಧ್ವೇಶ್, ಕುಮಾರಸ್ವಾಮಿ, ನಿವೇದಿತಾ ಉಪಸ್ಥಿತರಿದ್ದರು. ಸಾವಿರಾರು ವಿದ್ಯಾರ್ಥಿಗಳು ತಿರಂಗ ರ‌್ಯಾಲಿಯಲ್ಲಿ ಹೆಜ್ಜೆಹಾಕಿದರು.

ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡುತ್ತಲೇ ಭಾರತೀಯರಲ್ಲಿ ರಾಷ್ಟ್ರಭಕ್ತಿಯ ಪ್ರಬಲ ಕಿಡಿ ಹೊತ್ತಿಸಿದ ಹೋರಾಟಗಾರ ಸುಭಾಷ್ ಚಂದ್ರಬೋಸ್, ಈ ದೇಶ ಕಂಡ ಅಪ್ರತಿಮ ನಾಯಕ. ನನಗೆ ರಕ್ತ ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಘಂಟಾಘೋಷವಾಗಿ ಉದ್ಘೋಷಿಸಿದ ಭಾರತ ಸ್ವಾತಂತ್ರ್ಯಕ್ಕಾಗಿ ಹಲವಾರು ದೇಶಗಳ ನಾಯಕ ಮುತ್ಸದ್ಧಿಗಳ ಬೆಂಬಲ ಗಳಿಸಿದ ಅಪ್ರತಿಮ ಹೋರಾಟಗಾರ. ಹರ್ಷ ನಾರಾಯಣ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ