ಅಥಣಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಶಿಸ್ತಿನಿಂದ ಇದ್ದು, ಅನೇಕ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಸೇವೆ ಮಾಡಿರುವ ಅರವಿಂದ ದೇಶಪಾಂಡೆ ಸೇವಾಕಾರ್ಯ ಶ್ಲಾಘನೀಯ ಎಂದು ಅಖಿಲ ಭಾರತೀಯ ಆರ್‌ಎಸ್‌ಎಸ್ ಕಾರ್ಯಕಾರಿಣಿಯ ನಾಗಪುರದ ಸದಸ್ಯ ಸುರೇಶ ಜೋಶಿ ಹೇಳಿದರು.
ಪಟ್ಟಣದ ಜೆ.ಎ. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸವ್ಯಸಾಚಿ ಅಭಿನಂದನಾ ಸಮಿತಿ ವತಿಯಿಂದ ಅಥಣಿ ಆರ್‌ಎಸ್‌ಎಸ್ ಹಿರಿಯ ಮುಖಂಡ ಅರವಿಂದರಾವ ದೇಶಪಾಂಡೆ ಅಮೃತ ಮಹೋತ್ಸವ ನಿಮಿತ್ತ ಸವ್ಯಸಾಚಿ ಅಭಿನಂದನ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಆರ್‌ಎಸ್‌ಎಸ್ ಸದಸ್ಯರು ಉತ್ತಮ ವ್ಯಕ್ತಿಗಳಾಗಿ ರಾಷ್ಟ್ರದ ಶಕ್ತಿಗಳಾಗಿ ಬೆಳೆಯುತ್ತಾರೆ. ಅದಕ್ಕೆ ಅರವಿಂದ ದೇಶಪಾಂಡೆ ಅವರೇ ಸಾಕ್ಷಿ ಎಂದು ಶ್ಲಾಘಿಸಿದರು.
ಸಂಘದ ಹಿರಿಯ ಮುಖಂಡ ಸು.ರಾಮಣ್ಣ ಮಾತನಾಡಿ, ನಿಸ್ವಾರ್ಥ ಸೇವೆ ಆರ್‌ಎಸ್‌ಎಸ್ ಜೀವಾಳ. ಅರವಿಂದ ದೇಶಪಾಂಡೆ ಅವರು ಶತಾಯುಷಿಗಳಾಗಲಿ ಎಂದು ಹರಸಿದರು. ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ರಾಷ್ಟ್ರದ ಕಳಕಳಿಯ ಅರವಿಂದ ದೇಶಪಾಂಡೆ ಸೇವಾಜೀವನ ನಮ್ಮೆಲ್ಲರಿಗೂ ಮಾದರಿ. ನಾನೂ ಜೆಎ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದರಿಂದ ಉನ್ನತ ಸ್ಥಾನಕ್ಕೇರಿದ್ದೇನೆ
ಎಂದು ಹರ್ಷಪಟ್ಟರು.
ಸಂಸ್ಥೆಯ ನಿರ್ದೇಶಕ ಅನಿಲ ದೇಶಪಾಂಡೆ ಮಾತನಾಡಿ, ಅರವಿಂದ ದೇಶಪಾಂಡೆ ಮಾರ್ಗದರ್ಶನ ಸಂಸ್ಥೆಗೆ ಅಗತ್ಯವಿದೆ ಎಂದರು. ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸಮಾಜ ಮತ್ತು ದೇಶಕ್ಕಾಗಿ ದುಡಿದವರನ್ನು ಸಮಾಜ ಗುರುತಿಸಿ ಗೌರವಿಸುತ್ತದೆ. ಅಂಥವರಲ್ಲಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ದೇಶಪಾಂಡೆ ಕಾರ್ಯ ಹೆಮ್ಮೆಯ ಸಂಗತಿ ಎಂದರು.
ಅರವಿಂದರಾವ ದೇಶಪಾಂಡೆ ಮಾತನಾಡಿ, ಸಂಘ, ಹಿಂದುತ್ವ, ಸಮಾಜ ನನಗೆ ಪ್ರೇರಣೆ. ಇವೇ ಜೀವನದ ಉಸಿರು ಎಂದರು.
ಸವ್ಯಸಾಚಿ ಅಭಿನಂದನಾ ಸಮಿತಿ ಅಧ್ಯಕ್ಷ ಬಿ.ಎಲ್.ಪಾಟೀಲ ಮಾತನಾಡಿದರು.
ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಮೂರ್ತಿಯ ಶಿಲ್ಪಿ ಅರುಣ ಯೋಗಿರಾಜ ಅವರ ಶಿಲ್ಪಕಲೆ ಮೆಚ್ಚಿ ಅರವಿಂದ ದೇಶಪಾಂಡೆ ದಂಪತಿ ೭೫ಸಾವಿರ ರೂ. ಕಾಣಿಕೆ ನೀಡಿ ಸತ್ಕರಿಸಿದರು.
ಸವ್ಯಸಾಚಿ ಅಭಿನಂದನಾ ಗ್ರಂಥ ಸಂಪಾದಕ ಮಂಡಳಿ ಸದಸ್ಯರಾದ ಡಾ.ಬಾಳಾಸಾಹೇಬ ಲೋಕಾಪುರ, ಡಾ.ವಿ.ಎಸ್.ಮಾಳಿ, ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಗಜಾನನ ಮಂಗಸೂಳಿ, ಜೆಎ ಸಂಸ್ಥೆ ಅಧ್ಯಕ್ಷ ಡಾ.ರಾಮ ಕುಲಕರ್ಣಿ, ಸಂಸದ ಜಗದೀಶ ಶೆಟ್ಟರ್, ಈರಣ್ಣ ಕಡಾಡಿ, ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ, ಪಿ.ರಾಜೀವ, ಶ್ರೀಕಾಂತ ಕುಲಕರ್ಣಿ, ಅರುಣ ಶಹಾಪುರ, ಶಾಸಕ ದುರ್ಯೋಧನ ಐಹೊಳೆ, ಪ್ರಮೋದ ಮುತಾಲಿಕ, ಮಹಾಂತೇಶ ಕವಟಗಿಮಠ, ರಮೇಶ ಜಾರಕಿಹೊಳಿ, ಮೃಣಾಲ ಜೋಶಿ, ಅಶ್ವಿನಿ ಇತರರಿದ್ದರು.