ಜಿಲ್ಲೆ

ದೇಶದೊಳಗೆ ಡ್ರಗ್ಸ್ ಮಾಫಿಯಾ ಸದ್ದು

ಚಿತ್ರದುರ್ಗ: ದೇಶದೊಳಗೆ ಡ್ರಗ್ಸ್ ಮಾಫಿಯಾ ಸದ್ದು ಮಾಡುತ್ತಿದ್ದು, ಯುವಸಮೂಹ ಇದಕ್ಕೆ ದಾಸರಾಗಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜೀವಹಾನಿಯೂ ಉಂಟಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ವಿಷಾದಿಸಿದರು.

ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಕ್ಯಾಂಪಸ್ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ದೇಶ ಹಾಳು ಮಾಡಲು, ಯುವಸಮೂಹವನ್ನು ತಪ್ಪು ದಾರಿಯಲ್ಲಿ ನಡೆಸಿ, ಸರ್ವಾಂಗೀಣ ಅಭಿವೃದ್ಧಿ ನೆಲ ಕಚ್ಚಲು ಡ್ರಗ್ಸ್‌ವೊಂದೆ ಸಾಕು. ಆದ್ದರಿಂದ ಈ ಮಾಫಿಯಾ ಮಟ್ಟ ಹಾಕಲು ಎಲ್ಲರೂ ಕೈಜೋಡಿಸಬೇಕಿದೆ. ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸಲಿದೆ ಎಂದರು.

ಡ್ರಗ್ಸ್ ಪೆಡ್ಲರ್‌ಗಳ ಕುರಿತು ಸದಾ ಜಾಗೃತರಾಗಿರಿ. ಇಲಾಖೆ ದಂಧೆಕೋರರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಲ್ಲದೆ, ವಿದ್ಯಾರ್ಥಿಗಳು, ಸಾರ್ವಜನಿಕರು ಇಲಾಖೆಯ ಸಹಾಯವಾಣಿ, ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಂಡರೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಲಿದೆ. ಉತ್ತಮ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಪಿ.ಬಿ.ಭರತ್ ಮಾತನಾಡಿ, ಡ್ರಗ್ಸ್ ಸೇವನೆ, ಸಾಗಾಣೆ, ಪೆಡ್ಲರ್‌ಗಳ ಜೊತೆ ನೇರ ಅಥವಾ ಪರೋಕ್ಷ ವ್ಯವಹಾರ ಕೂಡ ಕಾನೂನು ಬಾಹಿರ. ಹೀಗಾಗಿ ಸಾಮಾಜಿಕ ಪಿಡುಗಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದರು.

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಪೊರೆನ್ಸಿಕ್ ವಿಭಾಗದ ಪ್ರೊ.ಕೃಷ್ಣ ಮಾತನಾಡಿ, ಮೆಥಾಂಫೆಟೈನ್ ಡ್ರಗ್ಸ್, ಕೋಕೇನ್, ಗಾಂಜಾ, ಅಫೀಮು ಅತಿ ಹೆಚ್ಚು ಅಪಾಯಕಾರಿ ಎಂದು ತಿಳಿಸಿದರು.

ಎನ್‌ಎಸ್‌ಎಸ್ ಸಂಯೋಜಕ ಡಾ.ನಿರಂಜನ್, ನಿಲಯಪಾಲಕ ಡಾ.ಜೆ.ಸತೀಶ್, ಪ್ರೊ.ತನುಜಾ, ನಾಗಸಾರಿಕಾ, ಅಮ್ರೀನ್ ಶಮಾ, ಜ್ಯೋತಿ ಶ್ರೀ, ಮಾದಿಯಾ ಶೇಖ್ ಇತರರಿದ್ದರು.