ಚಿತ್ರದುರ್ಗ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ 27ವರ್ಷಗಳ ಬಳಿಕ ಜಯ ದಾಖಲಿಸಿದ ಹಿನ್ನೆಲೆಯಲಿ ಬಿಜೆಪಿ ಕಾರ್ಯಕರ್ತರು ನಗರದ ವೀರ ವನಿತೆ ಒನಕೆ ಓಬವ್ವ ವೃತ್ತ ದಲ್ಲಿ ಶನಿವಾರ ವಿಜಯೋತ್ಸವ ಆಚರಿಸಿದರು.
ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ ಅವರ ಪರ ಘೋಷಣೆ ಮೊಳಗಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಎ. ಮುರುಳಿ, ಭ್ರಷ್ಟಾಚಾರ ಕಿತ್ತು ಹಾಕುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದ ಆಮ್‌ಆದ್ಮಿ ನಾಯಕರು ಸ್ವತಃ ಭ್ರ ಷ್ಟಾಚಾರದಲ್ಲಿ ಮುಳುಗಿದ್ದರಿಂದ ಮತದಾರರು ಅವರನ್ನು ತಿರಸ್ಕರಿಸಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತ ಒಪ್ಪಿ ದಿಲ್ಲಿಯಲ್ಲಿ ಬಹುಮತ ನೀಡಿದ್ದಾರೆ. ಕಾಂಗ್ರೆಸ್‌ಗೆ ಹೊಸದಿಲ್ಲಿ ಮತದಾರರು ಸೊನ್ನೆ ನೀಡಿದ್ದಾರೆ. ದೇಶದಿಂದ ಕಾಂಗ್ರೆಸ್ ಸಂಪೂರ್ಣ ನಿರ್ಮೂಲನೆಯಾಗುವ ಸಮಯ ದೂರವಿಲ್ಲ.ಮೋದಿ ಅವರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಜನರು ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.
ಲೋಕೇಶ್, ನಾಗರಾಜ ಉಪ್ಪನಾಯಕನಹಳ್ಳಿ, ಮಾಧುರಿ ಗಿರೀಶ, ವೆಂಕಟೇಶ ಯಾದವ್, ಶಂಭು, ನವೀನ, ಚಾಲುಕ್ಯ, ನಾಗರಾಜ ಬೇದ್ರೆ, ದಗ್ಗೆ ಶಿವಪ್ರಕಾಶ, ಬಸಮ್ಮ, ಛಲವಾದಿ ತಿಪ್ಪೇಸ್ವಾಮಿ, ಕಿರಣ, ಶಾಂತಮ್ಮ, ರೇಣುಕಾ, ಮಹಾಂತೇಶ ರಘು ಮತ್ತಿತರರು ಇದ್ದರು.