ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಭಾನುವಾರ ವಕ್ಫ್ ಬೋರ್ಡ್ನಿಂದ ರೈತರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮತ್ತಿತರರು ಇದ್ದರು. 
ಜಿಲ್ಲೆ

ದೇಶದಲ್ಲಿ ವಕ್ಫ್ ರದ್ದು ಮಾಡಲಿ

ಬಾಗಲಕೋಟೆ: ರೈತರ ಜಮೀನುಗಳ ಪಹಣೆಯಲ್ಲಿ ವಕ್ ಹೆಸರು ಕೂಡಿಸಿರುವುದು ಹಾಗೂ ರೈತರಿಗೆ ವಕ್ಫ್ ವತಿಯಿಂದ ನೋಟಿಸ್ ಜಾರಿ ಮಾಡಿರುವ ಬಗ್ಗೆ ಜಿಲ್ಲೆಯ ಬಿಜೆಪಿ ಮುಖಂಡರ ಕಣ್ಣು ಕೆಂಪಾಗಿಸಿದೆ. ವಕ್ಫನ ಈ ಕ್ರಮದ ವಿರುದ್ಧ ಹಾಗೂ ಇದಕ್ಕೆಲ್ಲ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿ ನ. ೫ ರಂದು ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲು ಸಿದ್ದತೆ ಮಾಡಿಕೊಂಡಿದೆ.

ಈ ಬಗ್ಗೆ ಭಾನುವಾರ ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿ, ವಕ್ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ತಮಗೆ ಕಂಡ ಜಮೀನುಗಳೆಲ್ಲ ವಕ್ಫ್ ಸೇರಿದ್ದೆಂದು ನೋಟಿಸ್ ನೀಡಿ, ರೈತರ ಜಮೀನುಗಳ ಪಹಣೆಯಲ್ಲಿ ವಕ್ ಹೆಸರು ಕೂಡಿಸಲು ಅದೇನು ಇವರ ಆಸ್ತಿನಾ? ಹಿಂದೆ ಭಾರತಕ್ಕೆ ಬಂದಿದ್ದ ಬಾಬರ ಏನಾದರೂ ಮಂಗೋಲಿಯಾದಿಂದ ಜಮೀನು ತೆಗೆದುಕೊಂಡು ಬಂದಿದ್ದಾ? ಈ ದೇಶದಲ್ಲಿ ರಕ್ಷಣಾ ಇಲಾಖೆ ಹಾಗೂ ರೈಲ್ವೆ ಇಲಾಖೆ ನಂತರ ಅತಿ ಹೆಚ್ಚು ಎಕರೆ ಜಮೀನು ಇರುವುದು ವಕ್ ಹೆಸರಿನಲ್ಲಿ. ಇವರೆಲ್ಲ ದೇಶದಲ್ಲಿ ಏನು ನಡೆಸಿದ್ದಾರೆ ಎಂದು ತೀವ್ರ ಕಿಡಿಕಾರಿದರು.

ಆ ಜಮೀರ್ ಅಹ್ಮದ್ ತಾನು ಮಾಡುವ ಪ್ರತಿ ಕೆಲಸವನ್ನು ಸಿಎಂ ಕೇಳಿಯೇ ಮಾಡಿದ್ದೇನೆ ಎನ್ನುತ್ತಾನೆ. ಅತ್ತ ಸಿಎಂ ಇದೆಲ್ಲ ನನಗೆ ಗೊತ್ತಿಲ್ಲ ಎನ್ನುತ್ತಾರೆ. ಸದ್ಯ ದೇಶದಲ್ಲಿ ವಕ್ ಹೆಸರಿನಲ್ಲಿ ೯.೪೦ ಎಕರೆ ಜಮೀನು ಇದೆ ಎಂದು ಊಹೆ ಮಾಡಲು ಸಹ ಆಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಜಗತ್ತಿನ ಅನೇಕ ಮುಸ್ಲಿಂ ರಾಷ್ಟ್ರಗಳಲ್ಲೆ ವಕ್ ಬೋರ್ಡ್ಗಳಿಲ್ಲ, ತಲಾಕ್ ಪದ್ದತಿಯೂ ಜಾರಿಯಲ್ಲಿ ಇಲ್ಲ. ಭಾರತದ ಸ್ವಾತಂತ್ರ‍್ಯದ ಬಳಿಕ ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಉದ್ದೇಶದಿಂದ ಇಂತ ವ್ಯವಸ್ಥೆಯನ್ನು ಜಾರಿಗೆ ತಂದು, ಬಹುಸಂಖ್ಯಾತ ಹಿಂದುಗಳ ಮನಸ್ಸಿಗೆ ನೋವಾಗುವಂತೆ ಮಾಡಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ವಕ್ ಬೋರ್ಡ್ ಮೊದಲು ರದ್ದುಪಡಿಸಬೇಕು. ರೈತರ ಜಮೀನುಗಳ ಪಹಣೆಯಲ್ಲಿ ಇರುವ ವಕ್ ಹೆಸರು ಮೊದಲು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ವಕ್ ನ ಕ್ರಮ ಇಡೀ ದೇಶದಲ್ಲಿ ದಿಗ್ಭ್ರಮೆ ಉಂಟು ಮಾಡಿದೆ. ವಕ್ ಬೋರ್ಡ್ ಯಾರ ಆಸ್ತಿ ಬೇಕಾದರೂ ತೆಗೆದುಕೊಳ್ಳಬಹುದು ಎನ್ನುವ ಕಲ್ಪನೆಯೇ ಆಶ್ಚರ್ಯ ಮೂಡಿಸುತ್ತದೆ. ಇವತ್ತು ರೈತರಿಗೆ ಕೊಟ್ಟ ನೋಟಿಸ್ ನಾಳೆ ಇನ್ಯಾರಿಗೋ ಕೊಡಬಹುದು. ಇಷ್ಟೊಂದು ಉದ್ಧಟತನ ಈಗಲೇ ಯಾಕೆ? ನಾಳೆ ಕೇಂದ್ರ ಸರ್ಕಾರ ವಕ್ ಕಾಯ್ದೆ ತಿದ್ದಪಡಿಗೆ ಮುಂದಾಗಿದ್ದೆ, ಅಷ್ಟರಲ್ಲಿ ಎಷ್ಟು ಸಾಧ್ಯವೋ ಅಷ್ಟು ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಆ ಒಬ್ಬ ಹುಚ್ಚ ಸಚಿವ ಜಮೀರ್ ಅಹ್ಮದ್ ಎಲ್ಲ ಕಡೆಗೂ ಮುಸ್ಲಿಂರ ಸಭೆಗಳನ್ನು ಮಾಡುತ್ತಿದ್ದಾನೆ. ಅದಕ್ಕೆ ಡಿಸಿಗಳನ್ನು ಕರೆದುಕೊಂಡು ಹೋಗುತ್ತಿದ್ದಾನೆ. ಅದೇಗೆ ಡಿಸಿಗಳು ಇಂಥ ಸಭೆಗಳಿಗೆ ಹೋಗುತ್ತಿದ್ದಾರೋ ಅರ್ಥ ಆಗುತ್ತಿಲ್ಲ. ವಕ್ಫ್ ಬೋರ್ಡ್ ಸೇರಿದ್ದು ಎನ್ನಲಾದ ಆಸ್ತಿಗಳಿಗೆ ಹಸಿರು ಬಣ್ಣ ಬಳಿದು ವಕ್ ಬೋರ್ಡ್ ಎಂದು ಬರೆದು ಬಿಡಿ ಎನ್ನುವ ಇವನದ್ದು ಎಷ್ಟು ದಡ್ಡತನ. ಇಂತಹ ದಡ್ಡ ಮಂತ್ರಿಯನ್ನು ಕ್ಯಾಬಿನೇಟ್ ನಲ್ಲಿ ಸಿದ್ದರಾಮಯ್ಯ ಹೇಗೆ ಇಟ್ಟುಕೊಂಡಿದ್ದಾರೋ? ಕಾಂಗ್ರೆಸ ಪಕ್ಷದ ಪ್ರಧಾನಿ ಮನಮೋಹನ ಸಿಂಗ್ ಅಧಿಕಾರ ಬಿಟ್ಟು ಹೋಗುವ ಕೊನೆ ಕ್ಷಣದಲ್ಲಿ ಮುಸ್ಲಿಂ ಪರ ಇಂತದ್ದೊಂದ ಕಾಯ್ದೆ ಜಾರಿ ಮಾಡಿದರು. ಆ ಪಪ್ಪು ಇದನ್ನೆ ಎಲ್ಲ ಕಡೆಗೂ ಭಾಷಣ ಮಾಡಿ ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.

ವಕ್ ತಿದ್ದುಪಡಿ ಮಸೂದೆ ೨೦೨೪ರ ಜಂಟಿ ಸಂಸದೀಯ ಸಮಿತಿಗೆ ಈಗಾಗಲೇ ನಾನು ಪತ್ರ ಬರೆದಿದ್ದೇನೆ. ನಾಳೆ ರಾಜ್ಯಸಭೆಯಲ್ಲೂ ಈ ಬಗ್ಗೆ ನಾನು ಧ್ವನಿ ಎತ್ತುತ್ತೇನೆ. ವಕ್‌ಗೆ ತಿದ್ದುಪಡಿ ಬದಲಿಗೆ ಅದನ್ನು ಸಂಪೂರ್ಣ ರದ್ದುಪಡಿಸಿ, ಎಲ್ಲ ಗೊಂದಲಗಳಿಗೆ ತೆರೆಏಳೆಯುವಂತೆ ನಾನು ಆಗ್ರಹಿಸುತ್ತೇನೆ. ಈ ದೇಶದಲ್ಲಿ ವಕ್ಫ್ ಬೋರ್ಡ್ ಅಗತ್ಯವೇ ಇಲ್ಲ ಎಂದು ಪ್ರತಿಪಾದರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ವಕ್ ತಿದ್ದುಪಡಿ ಬದಲಿಗೆ ರದ್ದು ಮಾಡಬೇಕು. ಬಿಜೆಪಿ ಯಾವಾಗ ಪ್ರತಿಭಟನೆಗೆ ಕರೆ ಕೊಟ್ಟಿತೋ ಆಗ ಎಚ್ಚೆತ್ತು ಕಾಂಗ್ರೆಸ್ ನೋಟಿಸ್ ಹಿಂಪಡೆಯುವ ಮಾತು ಹೇಳುತ್ತಿದೆ. ನೋಟಿಸ್ ಹಿಂಪಡೆದರೆ ಸಾಲದು, ಪಹಣೆಯಲ್ಲಿ ಕೂಡಿಸಿರುವ ವಕ್ಫ್ ಹೆಸರು ತೆಗೆಯುವವರಿಗೂ ನಾವು ಪ್ರತಿಭಟನೆ ಕೈಬಿಡುವ ಮಾತೆ ಇಲ್ಲ. ತಲೆ ತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರು ಜಮೀನು ವಕ್ಫನವರು ತಮ್ಮದೆಂದು ಹೇಳಿದರೆ ಅದನ್ನು ಯಾರಾದರೂ ಒಪ್ಪಲು ಸಾಧ್ಯವೆ? ಇದು ಎಂದಿಗೂ ಸಾಧ್ಯವಿಲ್ಲ. ರೈತರ ಜಮೀನುಗಳ ಪಹಣೆಯಲ್ಲಿನ ವಕ್ ಹೆಸರು ತೆಗೆಯುವವರೆಗೂ ಯಾವುದೇ ಕಾರಣಕ್ಕೂ ಬಿಜೆಪಿ ಪ್ರತಿಭಟನೆಯಿಂದ ದೂರ ಸರಿಯುವ ಮಾತೆ ಇಲ್ಲ ಎಂದು ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಜು ನಾಯ್ಕರ್, ಬಸವರಾಜ್ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ಮಲ್ಲಯ್ಯ ಮೂಗನೂರಮಠ ಇದ್ದರು