ಹೊಸಕೋಟೆ: ಕರೊನಾ ವೈರಸ್ ದೇಶದಲ್ಲಿ ಹುಟ್ಟಲು ಸಾಧ್ಯವಿಲ್ಲ. ಈ ವೈರಸ್ ವಿದೇಶಗಳಿಂದ ಬಂದಂತಹವರಲ್ಲಿ ಕಾಣಿಸಿಕೊಂಡಿದ್ದು, ಇದರ ಬಗ್ಗೆ ಸ್ಥಳೀಯರು ಮುನ್ನೆಚ್ಚರಿಕೆ ಕ್ರಮಗಳನ್ನು ಹೊಂದಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಶನಿವಾರ ತಾಲೂಕು ವೈದ್ಯಾಧಿಕಾರಿ ಹಾಗೂ ಆರೋಗ್ಯಾಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದರು.
ಕರೊನಾ ಸಂಬಂಧ ತಾಲೂಕಿನಾದ್ಯಂತ ಸುಮಾರು 1986 ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಯಾರೊಬ್ಬರಿಗೂ ಸೋಂಕು ಇರುವುದರ ಬಗ್ಗೆ ದೃಢಪಟ್ಟಿಲ್ಲ. ಸುಮಾರು 6 ಜನ ವಿದೇಶ ಪ್ರಯಾಣ ಮಾಡಿ ತಾಲೂಕಿಗೆ ಬಂದಿದ್ದರು. ಅವರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವರೆಗೆ ಅವರಿಗೂ ಕರೊನಾ ವೈರಸ್ ತಗುಲಿರುವ ಬಗ್ಗೆ ಆರೋಗ್ಯ ಇಲಾಕೆ ದೃಢ ಪಡಿಸಿಲ್ಲ. ಇದರ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್, ತಾಪಂ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಗೌಡ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸತೀಶ್, ಎಂವಿಜೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಪ್ರಮೋದ್, ನಗರಸಭೆ ಆರೋಗ್ಯಾಧಿಕಾರಿಗಳಾದ ಅಖಿಲಾ ಭಾನು, ಲಾವಣ್ಯಾ, ಬಾಲು ಇತರರಿದ್ದರು.
ಪರವಾನಗಿ ರದ್ದು ಮಾಡಲಾಗುವುದು: ಪ್ರತಿಯೊಬ್ಬರೂ ಮೂಗಿಗೆ ಮಾಸ್ಕ್ ಹಾಕುವ ಅವಶ್ಯಕತೆ ಇಲ್ಲ, ಕೇವಲ ನೆಗಡಿ ಕೆಮ್ಮು ಕಫದಿಂದ ಬಳಲುತ್ತಿರುವವರು ಹಾಗೂ ಅವರಿಗೆ ಚಿಕಿತ್ಸೆ ನೀಡುವ ವೈದ್ಯರಷ್ಟೇ ಮಾಸ್ಕ್ ಧರಿಸಿದರೆ ಸಾಕು. ತಾಲೂಕಿನಲ್ಲಿ ಯಾವುದೇ ಅಂಗಡಿ ಅಥವಾ ಮೆಡಿಕಲ್ ಸ್ಟೋರ್‌ಗಳಲ್ಲಿ ಮಾಸ್ಕ್‌ಗಳನ್ನು ಅಕ್ರಮವಾಗಿ ಸಂಗ್ರಹ ಮಾಡಿಟ್ಟುಕೊಂಡಿರುವುದು ಅಥವಾ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಅವರ ಮಾರಾಟ ಪರವಾನಗೆ ರದ್ದು ಮಾಡಲಾಗುವುದು ಎಂದು ಶರತ್ ಬಚ್ಚೇಗೌಡ ಎಚ್ಚರಿಸಿದರು.
ವಿದೇಶದಿಂದ ಬಂದವರು ಕಡ್ಡಾಯವಾಗಿ 14 ದಿನಗಳ ಕಾಲ ಯಾವುದೇ ಜನಸಂಪರ್ಕಕ್ಕೆ ಬಾರಬಾರದು. ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೋರಿಗಳಿಕೆ ಕ್ರಿಮಿ ನಾಶಕ ಸಿಂಪಡನೆ ಮಾಡಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಕೆ ಸೂಚಿಸಲಾಗಿದೆ. ಶರತ್ ಬಚ್ಚೇಗೌಡ, ಶಾಸಕ