ಸುರಪುರ: ಭಾರತ ಕಂಡ ಅತ್ಯಂತ ಪ್ರಭಾವಿ ಮತ್ತು ಶಕ್ತಿಶಾಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕಪ್ಪು ಹಣ ತಡೆಗಟ್ಟಲು ಹಳೆಯ ನೋಟ್ ಬ್ಯಾನ್ ಬಳಿಕ ದೇಶದ ಹಣಕಾಸು ವ್ಯವಹಾರದಲ್ಲಿ ಡಿಜಿಟಲ್ ಕ್ರಾಂತಿಯಾಗಿದೆ ಎಂದು ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ವಿಕಸಿತ ಭಾರತದ ಅಮೃತಕಾಲ, ಸೇವೆ, ಸುಶಾಸನ, ಬಡವರ ಕಲ್ಯಾಣದ ಮೋದಿ ಸರ್ಕಾರಕ್ಕೆ ೧೧ ವರ್ಷದ ಸಾಧನೆ ಕುರಿತ ಕಾರ್ಯಾಗಾರ ಉದ್ಘಾಟಿಸಿದ ಅವರು, ದೇಶದಲ್ಲಿ ಏಕರೂಪ ತೆರಿಗೆ ಪದ್ಧತಿ(ಜಿಎಸ್‌ಟಿ) ಜಾರಿ ಬಳಿಕ ಲಕ್ಷ ಕೋಟಿ ಲೆಕ್ಕದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ. ಇದು ಬಿಜೆಪಿ ಮತ್ತು ಮೋದಿ ಸಾಧನೆ ಎಂದರು.
ಮೂಲಸೌಕರ್ಯ ಅಭಿವೃದ್ಧಿಗಾಗಿ ೧೧ ಲಕ್ಷ ಕೋಟಿ ಖರ್ಚು ಮಾಡುತ್ತಿರುವ ಕೇಂದ್ರ ಸರ್ಕಾರ, ವೈರಿ ರಾಷ್ಟçಗಳ ಹೆಡೆಮುರಿ ಕಟ್ಟಿದೆ. ಸೈನಿಕರ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ ಎಂಬುದಕ್ಕೆ ಆಪರೇಷನ್ ಸಿಂಧೂರ ಕಾರ್ಯಾಚರಣೆ, ಚೀನಾ ವಿರುದ್ಧದ ಉರಿ, ಬಾಲಾಕೋಟ್ ಪ್ರಕರಣಗಳೇ ಸಾಕ್ಷಿ ಎಂದು ಹೇಳಿದರು.
ಜನಸಾಮಾನ್ಯರಿಗೆ ಬ್ಯಾಂಕ್ ಖಾತೆಗಳನ್ನು ಜನಧನ ಯೋಜನೆ ಮೂಲಕ ತೆರೆಯಲಾಗಿದೆ. ಉಜ್ವಲ, ಕಿಸಾನ್ ಸಮ್ಮಾನ್, ಆಯುಷ್ಮಾನ್‌ನಂಥ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಮುಸ್ಲಿಂ ಮಹಿಳೆಯರ ಜೀವನ ಸುರಕ್ಷೆಗಾಗಿ ತ್ರಿವಳಿ ತಲಾಖ್ ರದ್ದುಪಡಿಸುವ ಕಾನೂನು ಜಾರಿಗೊಳಿಸಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ, ಜಮ್ಮು ಕಾಶ್ಮೀರದ ೩೭೦ ವಿಧಿ ರದ್ದು ಮೂಲಕ ದೇಶದಲ್ಲಿ ವಿಲೀನದಂಥ ಅನೇಕ ಚಾರಿತ್ರಿಕ ಸಾಧನೆಗಳನ್ನು ಮೋದಿ ಸರ್ಕಾರ ಮಾಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ನಗರಸಭೆ ಸದಸ್ಯ ಸೋಮನಾಥ ಡೊಣ್ಣೆಗೇರಿ, ಮುಖಂಡರಾದ ವೇಣುಗೋಪಾಲ ನಾಯಕ ಜೇವರ್ಗಿ, ರಾಜಾ ಮುಕುಂದ ನಾಯಕ, ಯಲ್ಲಪ್ಪ ಕುರಕುಂದಿ, ಎಚ್.ಸಿ. ಪಾಟೀಲ್, ಬಸವರಾಜ ಸ್ಥಾವರಮಠ, ಪ್ರಕಾಶ, ಮೇಲಪ್ಪ ಗುಳಗಿ, ನಿಂಗಣ್ಣ ಐಕೂರ, ಕೃಷ್ಣ ರೆಡ್ಡಿ ಮುದನೂರ ಇತರರಿದ್ದರು.