ಜಿಲ್ಲೆ

ದೇಶದ ಸಮಾನತೆ, ಸಮಗ್ರತೆಗಾಗಿ ಸಂವಿಧಾನ ರಚನೆ


ಬೇಲೂರು: ಸಂವಿಧಾನಕ್ಕೆ ಅಪಚಾರವಾಗುವಂತಹ ಪ್ರಕರಣಗಳು ದಿನನಿತ್ಯ ನಡೆಯುತ್ತಿದ್ದು, ಇಂತಹ ಘಟನೆಗಳನ್ನು ಖಂಡಿಸಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.


ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಡಾ.ಬಿ.ಆರ್.ಅಂಬೇಡ್ಕರ್ ದೇಶದ ಸಮಾನತೆ ಹಾಗೂ ಸಮಗ್ರತೆಗಾಗಿ ಸಂವಿಧಾನವನ್ನು ರಚನೆ ಮಾಡಿದ್ದು, ದಲಿತರು, ಬಡವರು ಮತ್ತು ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಏಳಿಗೆಗಾಗಿ ಭಾರತ ಸಂವಿಧಾನ ನಿರ್ಮಾಣವಾಗಿದೆ ಎಂದರು.


ತಾಲೂಕಿನಲ್ಲಿ ಕೆಲವು ರಾಜಕೀಯ ಮುಂಡರು ಮುಂದಿನ ವಿಧಾನಸಭಾ ಚುನಾವಣೆಯ ಲಾಭಕ್ಕಾಗಿ ದಲಿತ ಕೇರಿಗಳಲ್ಲಿ ಅಂಬೇಡ್ಕರ್ ಮೂರ್ತಿಗಳನ್ನು ಸ್ಥಾಪನೆ ಮಾಡುತ್ತಿದ್ದು, ಕೇವಲ ಮೂರ್ತಿ ಸ್ಥಾಪನೆ ಮಾಡುವುದಲ್ಲದೆ ದಲಿತರು ಹಾಗೂ ಬಡವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.


ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ತಹಸೀಲ್ದಾರ್ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್, ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್, ದಲಿತ ಮುಖಂಡ ಎಂ.ಜಿ.ವೆಂಕಟೇಶ್, ಮಂಜುನಾಥ್, ಮರಿಯಪ್ಪ ಇತರರು ಇದ್ದರು.