ಮೈಸೂರು: ದೇಶದ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹು ದೊಡ್ಡ ಕಾನೂನಾಗಿದೆ. ಅಂತಹ ಸಂವಿಧಾನವನ್ನು ಪಾಲಿಸುವುದರ ಮೂಲಕ ಅದನ್ನು ರಕ್ಷಿಸುವುದು ನಮ್ಮ ಹೊಣೆ ಎಂದು ಮೈಸೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಡಿ.ಆನಂದ್ ಹೇಳಿದರು.
ಜಿಲ್ಲಾಡಳಿತ ವತಿಯಿಂದ ಕಲಾಮಂದಿರದ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆ ಒದಗಿಸಿದೆ. ಪ್ರತಿ ಪ್ರಜೆಗೂ ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ ಎಂದರು.
ಭಾರತದ ಸಂವಿಧಾನ ಇತರ ದೇಶಗಳ ಸಂವಿಧಾನದಂತಲ್ಲ. ಸ್ವಾತಂತ್ರೃ ಪೂರ್ವ, ಸ್ವಾತಂತ್ರೃದ ಸಮಯ ಹಾಗೂ ನಂತರದ ವಿಷಯಗಳನ್ನು ಒಳಗೊಂಡಿರುವ ಸಂವಿಧಾನವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲು ಭಾರತದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಸಂವಿಧಾನದ ಮಹತ್ವ ತಿಳಿಯಲು ಸಾಧ್ಯವಿಲ್ಲ ಎಂದರು
.
ಯುವ ಶಕ್ತಿ ಸಂವಿಧಾನವನ್ನು ರಕ್ಷಿಸಬೇಕು. ಚುನಾವಣೆಗಳ ಮೂಲಕ ದೇಶವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಲು ಯುವಜನರು ಜಾಗೃತರಾಗಬೇಕು. ಆ ಮೂಲಕ ಈ ದೇಶವನ್ನು ಭದ್ರವಾಗಿ ಕಟ್ಟುವಲ್ಲಿ ಯುವಜನತೆ ಕೈ ಜೋಡಿಸಬೇಕು ಎಂದರು.
ಸಂವಿಧಾನವನ್ನು ರಚಿಸಲು 7 ಜನರ ತಂಡವನ್ನು ರಚಿಸಲಾಗಿತ್ತು. ಸಂವಿಧಾನದ ರಚನಾ ಸಭೆಯಲ್ಲಿ 6 ಜನರು ನಾನಾ ಕಾರಣಗಳಿಂದ ಸಕ್ರಿಯವಾಗಿ ಭಾಗವಹಿಸದಿದ್ದಾಗ, ಡಾ.ಅಂಬೇಡ್ಕರ್ ಅವರೇ ಸಂವಿಧಾನ ರಚನೆಯ ಹೊಣೆ ಹೊತ್ತರು.
ದಿನದ 18 ಗಂಟೆಗಳ ಕಾಲ ಶ್ರಮವಹಿಸಿ, ಸತತ 2 ವರ್ಷ 11 ತಿಂಗಳ 17 ದಿನಗಳ ಕಾಲಾವಧಿಯಲ್ಲಿ ಸಂವಿಧಾನವನ್ನು ರಚಿಸಿದರು. ಇದು ಬಡವರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಹಾಗೂ ಸಮಾಜದ ಎಲ್ಲ ಜನರಿಗೂ ಉಪಯುಕ್ತವಾಗಿದೆ. ಈ ಕಾರಣದಿಂದಲೇ ಡಾ.ಅಂಬೇಡ್ಕರ್ ಅವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯಲಾಗುತ್ತದೆ ಎಂದರು.
ಸಂವಿಧಾನವನ್ನು ಜಾರಿ ಮಾಡುವ ಸಂದರ್ಭದಲ್ಲಿ 7000ಕ್ಕೂ ಹೆಚ್ಚು ಟೀಕೆ-ಟಿಪ್ಪಣಿಗಳು ಬಂದಿದ್ದವು. ಅವುಗಳಿಗೆ ಸಮರ್ಥವಾಗಿ ಸ್ಪಷ್ಟನೆ ನೀಡುವ ಮೂಲಕ ಅಂಬೇಡ್ಕರ್ ಅವರು ಪ್ರಪಂಚದ ಬೃಹತ್ ಹಾಗೂ ಅರ್ಥಪೂರ್ಣ ಸಂವಿಧಾನವನ್ನು ದೇಶಕ್ಕೆ ನೀಡಿದರು. ಹಾಗಾಗಿ, ಸಂವಿಧಾನ ದಿನದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ಸಮಾಜದಲ್ಲಿ ಧ್ವನಿ ಇಲ್ಲದ ಜನರ ಧ್ವನಿಯಾಗಿ ಕಾಯುತ್ತಿರುವುದೇ ಸಂವಿಧಾನ. ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಶಾಂತಿಯುತವಾಗಿ ಜೀವಿಸಲು, ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲರಾಗಿ ಬದುಕಲು, ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಂವಿಧಾನವು ಅತ್ಯವಶ್ಯ. ಪ್ರತಿಯೊಂದು ಧರ್ಮವು ತಮ್ಮದೇ ಆದ ಧರ್ಮ ಗ್ರಂಥ ಹೊಂದಿವೆ. ಆದರೆ ಅದನ್ನೆಲ್ಲ ಮೀರಿದ, ಎಲ್ಲ ಧರ್ಮದವರಿಗೂ ಅನ್ವಯಿಸುವ ರಾಷ್ಟ್ರೀಯ ಗ್ರಂಥವೇ ಸಂವಿಧಾನ. ಅದನ್ನು ಉಳಿಸಿ ರಕ್ಷಿಸುವುದು ಹಾಗೂ ಪಾಲಿಸುವುದು ನಮ್ಮ ಕರ್ತವ್ಯ ಎಂದರು.
ಎಲ್ಲರೂ ಒಂದಾಗಿ ಸಮಾನತೆಯ ರಾಷ್ಟ್ರ ನಿರ್ಮಾಣ ಮಾಡಬೇಕು. ಒಂದು ದೇಶವು ಎಲ್ಲ ರೀತಿಯಿಂದಲೂ ಮುಂದುವರಿಯಬೇಕು ಎಂದರೆ ಮಹಿಳೆಯರು ಅಭಿವೃದ್ಧಿ ಹೊಂದಬೇಕು. ಸಂವಿಧಾನದಲ್ಲಿರುವ ಮಹಿಳಾ ಮೀಸಲಾತಿ ಉಪಯೋಗಿಸಿಕೊಂಡು ಪರಿಶ್ರಮದಿಂದ ಮಹಿಳೆಯರು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಬೇಕು ಎಂದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ. ಈ ಯೋಜನೆಗಳ ದೂರದೃಷ್ಟಿಯನ್ನು ಅರಿತು ಜನರು ಸದುಪಯೋಗಪಡಿಸಿಕೊಳ್ಳಬೇಕು. ಸಂವಿಧಾನದ ಆಶಯ ಸಂರಕ್ಷಿಸುವ ಹಾಗೂ ಜನರಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ನಗರಪಾಲಿಕೆ ಆಯುಕ್ತ ಆಶಾದ್ ಉರ್ ರಹಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಮುಖಂಡರಾದ ಅಹಿಂದ ಜವರೇಗೌಡ, ಸೋಮಯ್ಯ ಮಲೆಯೂರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿದ್ಯಾರ್ಥಿನಿಲಯದ ನಿಲಯಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.