ಜಿಲ್ಲೆ

ದೇಶದ ಸಂರಕ್ಷಣೆಗೆ ಮುಂದಾಗೋಣ

ಬಾಗಲಕೋಟೆ: ಯೋದರು ದೇಶದ ರಕ್ಷಣೆಯಲ್ಲಿ ತೊಡಗಿದರೆ, ನಮ್ಮ ನೆಲ, ಜಲ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು ಎಂದು ಶಾಸಕ ಎಚ್.ವಾಯ್.ಮೇಟಿ ಹೇಳಿದರು.

ಬಾಗಲಕೋಟೆ ನಗರಸಭೆಯ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡ ನನ್ನ ಮಣ್ಣು, ನನ್ನ ದೇಶ ಅಭಿಯಾನ ಕಾರ್ಯಕ್ರಮದಡಿ ಹುತಾತ್ಮ ಯೋಧರ ಶಿಲಾಫಲಕ ಅನಾವರಣಗೊಳಿಸಿ ಮಾತನಾಡಿದ ಅವರು ಯೋಧರು ಹಗಲು, ರಾತ್ರಿಯನ್ನದೇ ದೇಶ ಕಾಯುವ ಕೆಲಸ ಮಾಡುತ್ತಿದ್ದಾರೆ. ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ವೀರ ಯೋಧರನ್ನು ಗೌರವಿಸುವ ಹಿನ್ನಲೆಯಲ್ಲಿ ಈ ಅಭಿಯಾನ ಪ್ರಾರಂಭಿಸಲಾಗಿದ್ದು, ದೇಶಾದ್ಯಂತ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು.

ದೇಶದ ಭದ್ರತೆಯನ್ನು ಕಾಪಾಡಿ ಹೋರಾಟದ ನಡುವೆ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಪ್ರತಿಯೊಬ್ಬ ಭಾರತೀಯರು ಗೌರಿಸಬೇಕು. ಅವರ ಪ್ರಾಣ, ಬಲಿದಾನದಿಂದ ಎಲ್ಲರೂ ನೆಮ್ಮದಿಯಿಂದ ರಾತ್ರಿ ನಿದ್ದೆ ಮಾಡುತ್ತಿದ್ದೇವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ಯೋಧರ ಸ್ಮರಣೆಗಾಗಿಯೇ ನನ್ನ ಮಣ್ಣು ನನ್ನ ದೇಶ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮಾತನಾಡಿ ದೇಶ ಕಾಯುವ ವೀರ ಯೋಧರನ್ನು ಸ್ಮರಿಸುವ ನಿಟ್ಟಿನಲ್ಲಿ ಸರಕಾರ ನನ್ನ ಮಣ್ಣು, ನನ್ನ ದೇಶ ಅಭಿಯಾನ ಹಮ್ಮಿಕೊಂಡಿದೆ. ಅವರ ತ್ಯಾಗ ಸ್ಮರಣೆಗಾಗಿ ನಾವೆಲ್ಲರೂ ಕೃತಜ್ಞತೆ ಸಲ್ಲಿಸೋಣ ಎಂದರು. ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ವೀರ ಯೋಧವಾರ ಯಂಕಪ್ಪ ಜಾನಮಟ್ಟಿ, ಸೋಮಶೇಖರ ತಡಲಗಿ, ಮೃತುಂಜಯ ಪೂಜಾರಿ ಹಾಗೂ ಮೃತ ಯೋಧರ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಪಂಚಪ್ರಾಣ ಪ್ರತಿಜ್ಞೆಗೈಯಲಾಯಿತು. ವಸುದಾ ಹಾಗೂ ವೀರ ಯೋಧರಿಗೆ ವಂದನೆ ಸಲ್ಲಿಸಲಾಯಿತು. ಅಭಿಯಾನದ ಅಂಗವಾಗಿ 75 ಗಿಡಗಳನ್ನು ನಗರಸಭೆ ಆವರಣದಲ್ಲಿ ನೆಡಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಹಾಜಿಸಾಬ ದಂಡಿನ, ಚನ್ನವೀರ ಅಂಗಡಿ, ಭುವನೇಶ್ವರಿ ಪುಪ್ಪಸ್ತ, ಪ್ರಕಾಶ ಹಂಡಿ, ಶಿವಬಸವ ಬಳ್ಳಾರಿ, ನಗರಸಭೆ ಪೌರಾಯುಕ್ತ ರಮೇಶ ಜಾದವ ಸೇರಿದಂತೆ ಇತರರು ಉಪಸ್ಥಿತರಿದ್ದರು.