ಜಿಲ್ಲೆ

ದೇಶದ ಸಂಪರ್ಕ ಭಾಷೆಯಾಗಿ ಹಿಂದಿ ಬಳಸಿ: ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಮೈಸೂರು: ದೇಶದ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಎಲ್ಲೆಡೆ ಪಸರಿಸಬೇಕಿದೆ ಎಂದು ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದರು.

ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಭಾಷಾ ವಿಭಾಗದ ವತಿಯಿಂದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ದಕ್ಷಿಣ ಹಾಗೂ ನೈಋತ್ಯ ವಿಭಾಗದ ಅಧಿಕೃತ ಭಾಷಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಯಾವುದೇ ಭಾಷೆ ವಿವಾದಕ್ಕೆ ಉಪಯೋಗವಾಗಬಾರದು. ಅದು ಸಾರ್ವಜನಿಕರನ್ನು ಸಂಘಟಿಸಲು ಬಳಕೆಯಾಗಬೇಕು. ಜನರ ನಡುವಿನ ಮಾಧ್ಯಮ ಭಾಷೆಯಾಗಿ ಹಿಂದಿ ಸ್ವಾತಂತ್ರ್ಯ ಚಳವಳಿಯಲ್ಲಿ ಎಲ್ಲರನ್ನೂ ಒಂದುಗೂಡಿಸಿತ್ತು. ಈಗಲೂ ಅದು ಆ ಕೆಲಸವನ್ನು ಮಾಡುತ್ತಿದೆ. ಆದ್ದರಿಂದ ದೇಶದ ಎಲ್ಲ ಭಾಷೆಗಳ ಮೇಲೆ ಅಭಿಮಾನವನ್ನು ಉಳಿಸಿಕೊಂಡು ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಅಭಿವೃದ್ಧಿಪಡಿಸಬೇಕಿದೆ ಎಂದರು.

ಸಂಸ್ಕೃತಿ ತಿಳಿದುಕೊಳ್ಳುವುದೆಂದರೆ ಅದು ಸಭ್ಯತೆಯ ಯಾತ್ರೆಯಾಗಿದೆ. ಯಾವುದೇ ವಿದೇಶಿ ಭಾಷೆಗಳನ್ನು ಬೇಕಾದರೂ ಕಲಿಯಬಹುದು. ಆದರೆ, ನಮ್ಮ ದೇಶದ ಭಾಷೆಗಳನ್ನು ಪ್ರೀತಿಸಬೇಕು. ಅವುಗಳ ಪ್ರಗತಿಗೂ ನೆರವಾಗಬೇಕೇ ಹೊರತು ದ್ವೇಷಿಸಲು ಹೋಗಬಾರದು ಎಂದು ಸಲಹೆ ನೀಡಿದರು.

ಭಾರತೀಯ ಸಮಾಜದ ಅಭಿವ್ಯಕ್ತಿಯೇ ಭಾಷೆಯಾಗಿದೆ. ತಾಯಿ ಸರಸ್ವತಿ ನೀಡಿರುವ ದೇಶದ ಎಲ್ಲ ಜ್ಞಾನದ ಭಾಷೆಗಳನ್ನು ಕಲಿತಾಗ ಮಾತ್ರವೇ ವೈವಿಧ್ಯತೆ, ವಿಭಿನ್ನತೆ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ದೇವರಲ್ಲಿ ನಂಬಿಕೆ, ಶ್ರದ್ಧೆ ಪ್ರದರ್ಶಿಸಿದಂತೆಯೇ ಭಾಷಾ ಸಂಸ್ಕೃತಿಯನ್ನು ಸನ್ಮಾನಿಸಬೇಕು. ವರ್ಣಭೇದ, ವರ್ಗ ವಿಂಗಡಣೆಯಾಗಿ ವಿಶ್ವದ ವಿವಿಧ ನಾಗರಿಕತೆಗಳು ಭಾಷೆಯನ್ನು ಬಳಸಿಕೊಂಡಿವೆ. ಆದರೆ, ಭಾರತೀಯರು ಅದನ್ನು ಆಕ್ಷೇಪಿಸಿದ್ದರು ಎಂದು ಹೇಳಿದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಾತನಾಡಿ, ಕೇಂದ್ರ ಸರ್ಕಾರವು ಮಾತೃಭಾಷಾ ಕಲಿಕೆ ಹಾಗೂ ಅಭಿವೃದ್ಧಿಗೆ ಮಹತ್ವ ನೀಡಿದೆ. ದಕ್ಷಿಣ ಭಾರತೀಯ ಭಾಷಿಗರು ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ. ಅವರೊಂದಿಗೆ ಅವರ ಭಾಷೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಪಡೆದುಕೊಂಡಿದೆ ಎಂದರು.

ರಾಷ್ಟ್ರೀಯ ಏಕೀಕರಣದಲ್ಲಿ ಹಿಂದಿ ಭಾಷೆಯ ಪಾತ್ರ ಹಿರಿದಾಗಿದೆ. ಮಹಾತ್ಮ ಗಾಂಧೀಜಿ ಅವರೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಸ್ಥಾಪಿಸಿದ್ದರು. ಇದು ಹಿಂದಿ ಭಾಷೆ ಬೆಳವಣಿಗೆಗೆ ನೆರವಾಗಿದೆ ಎಂದು ಹೇಳಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತಮಿಳುನಾಡು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಕೃಷ್ಣನ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಅಧಿಕೃತ ಭಾಷಾ ವಿಭಾಗದ ಕಾರ್ಯದರ್ಶಿ ಅಂಶುಲಿ ಆರ್ಯ, ಜಂಟಿ ಕಾರ್ಯದರ್ಶಿ ಮೀನಾಕ್ಷಿ ಜೋಲಿ, ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಅನುರಾಗ್ ಕುಮಾರ್, ಕೇಂದ್ರೀಯ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಬಿನೋದ್ ಕುಮಾರ್, ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಇದ್ದರು.

ಅಧಿಕಾರಿ, ಸಿಬ್ಬಂದಿಗೆ ಸನ್ಮಾನ

ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಪಾಂಡಿಚೇರಿ, ಲಕ್ಷ ದ್ವೀಪದ ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕ್‌ಗಳಲ್ಲಿ ಭಾಷಾ ಅನುಷ್ಠಾನಗೊಳಿಸಿದ 32 ಉತ್ತಮ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿ, ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.