ಚಾಮರಾಜನಗರ: ದೇಶದ ಪ್ರತಿಯೊಬ್ಬ ಮಕ್ಕಳು ಭವಿಷ್ಯದ ಸಂಪತ್ತಾಗಿದ್ದು, ಅವರಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಉಜ್ವಲವಾದ ಭವಿಷ್ಯವನ್ನು ರೂಪಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಭಾವತಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಡತನ ಮತ್ತು ಇನ್ನಿತರೆ ಕಾರಣಗಳಿಂದ ಮಕ್ಕಳು ಈದುವ ವಯಸ್ಸಿನಲ್ಲಿ ದುಡಿಮೆಗೆ ಹೋಗುತ್ತಾರೆ. ದೇಶದಲ್ಲಿರುವ ಬಡತನವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗದಿದ್ದರೂ, ಮಕ್ಕಳಿಗೆ ಉತ್ತಮವಾದ ಮೌಲ್ಯಯುತ ಶಿಕ್ಷಣವನ್ನು ನೀಡಬೇಕಿದೆ. ಶಿಕ್ಷಣವನ್ನು ಪಡೆದುಕೊಳ್ಳುವ ವಯಸ್ಸಿನಲ್ಲಿ ಮಕ್ಕಳು ದುಡಿಯಲು ಮುಂದಾದರೇ ತಮ್ಮ ಭವಿಷ್ಯವನ್ನು ಕಳೆದುಕೊಳ್ಳುತ್ತಾರೆ. ದೇಶದ ಸಂಪತ್ತಾಗಿರುವ ಮಕ್ಕಳ ಹಕ್ಕುಗಳನ್ನು ನಾವೆಲ್ಲರೂ ರಕ್ಷಿಸಬೇಕಿದೆ ಎಂದರು.
ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬಾಲಕಾರ್ಮಿಕ ಯೋಜನಾ ಸೊಸೈಟಿ ಮತ್ತು ಹಲವಾರು ಸಂಘ-ಸಂಸ್ಥೆಗಳು ಪ್ರಯತ್ನವನ್ನು ಮಾಡುತ್ತಿದೆ. ಇನ್ನೂ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕಿದೆ. ಇದು ಪ್ರತಿಯೊಬ್ಬರ ಜವಾಬ್ದಾರಿಯೂ ಆಗಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸದಸ್ಯ ಕಾರ್ಯದರ್ಶಿ ಎಂ.ಈಶ್ವರ್, ಅಪರ ಜಿಲ್ಲಾಧಿಕಾರಿ ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ ವಿಭಾಗ) ಉಪನಿರ್ದೇಶಕಿ ಎಚ್.ಎನ್.ಪುಟ್ಟಗೌರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ, ಕಾರ್ಮಿಕ ಅಧಿಕಾರಿ ಡಾ.ಎಂ.ಸವಿತಾ, ಬಚ್ಪನ್ ಬಚಾವೋ ಆಂದೋಲನದ ರಾಜ್ಯ ಸಂಯೋಜಕ ಬಿನುವರ್ಗೀಸ್, ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಮಹೇಶ್ ಹಾಗೂ ಇತರರು ಹಾಜರಿದ್ದರು.
ಜಾಥಾ ಕಾರ್ಯಕ್ರಮ:
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಭಾವತಿ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆ ಶ್ರೀಭವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಸಾಗಿ ವೇದಿಕೆ ಕಾರ್ಯಕ್ರಮ ನಡೆದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಅಂತ್ಯವಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಲ್ಲಿ ವಿಜೇತಾದ ವಿದ್ಯಾರ್ಥಿಗಳು, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಈ ಹಿಂದೆ ಬಾಲಕಾರ್ಮಿಕರಾಗಿದ್ದು, ಉತ್ತಮ ಶಿಕ್ಷಣ ಪಡೆದುಕೊಂಡು ಭವಿಷ್ಯ ರೂಪಿಸಿಕೊಂಡವರನ್ನು ಸನ್ಮಾನಿಸಲಾಯಿತು.