ಜಿಲ್ಲೆ

ದೇಶದ ಭವಿಷ್ಯ ಯುವಕರ ಕೈಯಲ್ಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದ ಪ್ರಸ್ತುತತೆ ಮತ್ತು ಭವಿಷ್ಯ ಯುವ ಸಮುದಾಯದ ಕೈಯಲ್ಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.
26ನೇ ರಾಷ್ಟ್ರೀಯ ಯುವ ಜನೋತ್ಸವದ 2ನೇ ದಿನವಾದ ಶನಿವಾರ ಇಲ್ಲಿನ ಕೃಷಿ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಯುವ ಶೃಂಗ ಸಭೆಯಲ್ಲಿ ‘ಸ್ಟಾರ್ಟ್ ಅಪ್ ಮತ್ತು ಡಿಜಿಟಿಲ್ ಇಂಡಿಯಾ’ ಕುರಿತು ಅವರು ಮಾತನಾಡಿದರು.
ಪ್ರಸ್ತುತ ಭಾರತವು ಎಲ್ಲ ಕ್ಷೇತ್ರದಲ್ಲಿ ಬದಲಾವಣೆ ಕಾಣುತ್ತಿದೆ. ಅದರಲ್ಲೂ ಮುಖ್ಯವಾಗಿ ತಂತ್ರಜ್ಞಾನದಲ್ಲಿ ಹೆಚ್ಚಿನ ಬದಲಾವಣೆ ಹೊಂದುತ್ತಿರುವ ರಾಷ್ಟ್ರವಾಗಿದೆ. ಸದ್ಯ ಭಾರತ ಜಗತ್ತಿನ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ 3ನೇ ಸ್ಥಾನಕ್ಕೆ ಏರಲಿದೆ. ನವೋದ್ಯಮ ಮತ್ತು ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರತ, ಇಂದು ಕ್ರೀಡೆ, ಕಲೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಯುವಕರು ಸಾಧನೆ ಮಾಡುತ್ತಿದ್ದಾರೆ ಎಂದರು.
ಯುವಕರು ಸ್ವಾಮಿ ವಿವೇಕಾನಂದರ ವಿಚಾರ ಅನುಸರಿಸಿಕೊಂಡು ನಿಮ್ಮ ಮೇಲೆ ನಿಮಗೆ ವಿಶ್ವಾಸ ಹೊಂದಬೇಕು ಎಂದು ಸಲಹೆ ನೀಡಿದ ಅವರು, ಸವಾಲುಗಳನ್ನು ಎದುರಿಸಿದಾಗಲೇ ಸಾಧನೆ ಸಾಧ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹ ಹೆಚ್ಚಿನ ಆದ್ಯತೆ ನೀಡಬೇಕು. ಭಾರತ ಬಹು ವಿಧದ ಸಂಸ್ಕೃತಿ ಹೊಂದಿದ ವಿಶಾಲ ದೇಶ. ಮುಂದಿನ ದಿನಗಳಲ್ಲಿ ವಿಶ್ವ ಗುರುವಾಗಿ ಹೊರಹೊಮ್ಮಲ್ಲಿದೆ ಎಂದರು.
ಡಾ. ಮುಕುಂದರಾಜ ಗೋಷ್ಠಿ ನಿರ್ವಹಿಸಿರು. ಕರ್ನಾಟಕ ರಾಜ್ಯದ ಯುವ ಜನ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶಾಲಿನಿ ರಜನೀಶ, ಕೇಂದ್ರದ ಯುವ ಜನ ಸೇವೆ ಸಬಲೀಕರಣದ ಮತ್ತು ಕ್ರೀಡಾ ಇಲಾಖೆ ಜಂಟಿ ಕಾರ್ಯದರ್ಶಿ ನಿತೀಶಕುಮಾರ ಮಿಶ್ರಾ, ಇತರರು ಇದ್ದರು. ನಂತರ ನಡೆದ ಸಂವಾದದಲ್ಲಿ ಸಂಸದ ತೇಜ್ವಿ ಸೂರ್ಯ ಪ್ರಶ್ನೆಗಳಿಗೆ ಉತ್ತರಿಸಿದರು.
ಇದಕ್ಕೂ ಪೂರ್ವ ನಡೆದ ವಿವಿಧ ಗೋಷ್ಠಿಗಳಲ್ಲಿ ಯುವಜನ ಸೇವೆ ಇಲಾಖೆ ಕಾರ್ಯದರ್ಶಿ ಮೀರಾ ಲೋಚನ್, ದೇಶಪಾಂಡೆ ಪ್ರತಿಷ್ಠಾನದ ಅರವಿಂದ ಚಿಂಚೋರೆ, ನವೋದ್ಯಮಿ ಅಮಿತ ಅಮರನಾಥ, ರಿತೇಶಕುಮಾರ ಶರ್ಮಾ, ವಿವೇಕ ಪವಾರ್, ಮದನ ಪದಕಿ, ಇತರರು ಮಾತನಾಡಿದರು.