ಜಿಲ್ಲೆ

ದೇಶದ ಪ್ರಥಮ ಮ್ಯಾಂಗನೀಸ್ ಕಾರ್ಖಾನೆ

ಯು ಎಸ್ ಪಾಟೀಲ ದಾಂಡೇಲಿ

ದೇಶದ ಮೊಟ್ಟಮೊದಲ ಮ್ಯಾಂಗನೀಸ್ ಕಾರ್ಖಾನೆ ಆರಂಭವಾಗಿದ್ದು ಎಲ್ಲಿ ಗೊತ್ತೆ? ಅದು ನಮ್ಮ ದಾಂಡೇಲಿಯಲ್ಲಿಯೇ! ಇದೇ ದಾಂಡೇಲಿ ಫೆರೋಅಲೈಸ್ ಪ್ರೖೆವೇಟ್ ಲಿಮಿಟೆಡ್ ಕಂಪನಿಯ ಕಾರ್ಖಾನೆ. ಡಿಎಸ್​ಎಫ್​ಎ ಎಂದೂ ಕರೆಯುತ್ತಾರೆ.
1955ರಲ್ಲಿ ಆರಂಭಗೊಂಡ ಈ ಕಾರ್ಖಾನೆಯು ಕಾರಣಾಂತರಗಳಿಂದಾಗಿ 2001ರಲ್ಲಿ ಮುಚ್ಚಿದೆ. ಅರಣ್ಯ ಇಲಾಖೆಯಿಂದ ಗುತ್ತಿಗೆ ಆಧಾರಿತವಾಗಿ ಪಡೆದ 196 ಎಕರೆ ಜಾಗ ಈಗ ತಕರಾರಿನಲ್ಲಿದೆ. ಈ ಕಂಪನಿ ಪುನರಾರಂಭವಾಗುವುದೋ, ಅರಣ್ಯ ಇಲಾಖೆ ತೆಕ್ಕೆಗೆ ಈ ಜಾಗ ಮರಳಿ ಹೋಗುವುದೋ ಎಂಬ ಪ್ರಶ್ನೆ ಉದ್ಭವಿಸಿದೆ.

56 ವರ್ಷಗಳ ಕಾಲ ಕಾರ್ಯನಿರ್ವಹಣೆ ಮಾಡಿ, ಸಹಸ್ರಾರು ಜನರಿಗೆ ಉದ್ಯೋಗ ಕಲ್ಪಿಸಿದ ಈ ಕಾರ್ಖಾನೆಯ ಇತಿಹಾಸ ಕುತೂಹಲಕಾರಿಯಾಗಿದೆ.

ದೇಶದ ಮೊದಲ ಫೆರೊ ಮ್ಯಾಂಗನೀಸ್ ಕಾರ್ಖಾನೆಯಾದ ದಾಂಡೇಲಿ ಫೆರೋಅಲೈಸ್ ಪ್ರೖೆವೇಟ್ ಲಿಮಿಟೆಡ್ (ಡಿಎಸ್​ಎಫ್​ಎ) ನಗರದ ಟೌನ್​ಶಿಪ್ ಭಾಗದಲ್ಲಿ ಆರಂಭಗೊಂಡಿದ್ದು 1955-1956ರಲ್ಲಿ.

ಕಾರ್ಖಾನೆಯ ಆಡಳಿತ ಮಂಡಳಿಯವರು ಅಂದಿನ ಸರ್ಕಾರಗಳಿಂದ ದಾಂಡೇಲಿಯ ಕುಂಬಾರಕೊಪ್ಪ ಗ್ರಾಮದ ಸರ್ವೆ ನಂಬರ್ 6-ಬ ದಲ್ಲಿ 5/10/1956ರಂದು ಮೊದಲ ಹಂತದಲ್ಲಿ 96 ಎಕರೆ ಹಾಗೂ ಎರಡನೆಯ ಹಂತದಲ್ಲಿ 1/7/1965ರಂದು 100 ಎಕರೆ ಅಂದರೆ ಒಟ್ಟು 196 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ಲೀಸ್ ಮೇಲೆ ಮ್ಯಾಂಗನೀಸ್ ಅದರಿನ ಉತ್ಪನ್ನಗಳ ಉತ್ಪಾದನೆಗಾಗಿ ಪಡೆದುಕೊಂಡರು. ಈ ಗುತ್ತಿಗೆ ಅವಧಿಯನ್ನು 30 ವರ್ಷ ಎಂದು ಸರ್ಕಾರ ನಿಗದಿಪಡಿಸಿತ್ತು.

ಡಿಎಸ್​ಎಫ್​ಎ ಕಾರ್ಖಾನೆಯ ಸಂಸ್ಥಾಪಕರು ದಿ. ಲಾಲಭಾಯಿ ಪಟೇಲ. ನಂತರ ಇವರ ಕುಟಂಬದವರು ಕಾರ್ಖಾನೆಯನ್ನು ನಡೆಸಿಕೊಂಡು ಬಂದರು. ಕಾರ್ಖಾನೆಯ ಆಡಳಿತದ ಕೇಂದ್ರ ಕಚೇರಿ ಮುಂಬೈನಲ್ಲಿತ್ತು. ಇತ್ತೀಚೆಗಷ್ಟೇ ಅದನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಕಾರ್ಖಾನೆಯಲ್ಲಿ ಮ್ಯಾಂಗನೀಸ್ ಅದಿರಿನಿಂದ ಉತ್ತಮ ಗುಣಮಟ್ಟದ ವಿವಿಧ ಗ್ರೇಡ್​ಗಳ ಉತ್ಪನ್ನ ತಯಾರಿಸಲಾಗುತ್ತಿತ್ತು. ಸಿಲ್ಕೊ ಮ್ಯಾಂಗನೀಸ್ ಮತ್ತು ಫೆರೊ ಮ್ಯಾಂಗನೀಸ್​ನ ವಿವಿಧ ಆಕಾರದ ಬ್ಲಾಕ್​ಗಳನ್ನು ಸಿದ್ಧಪಡಿಸಲಾಗುತ್ತಿತ್ತು. ದೇಶದ ನಾನಾ ಕಾರ್ಖಾನೆಗಳ, ಅದರಲ್ಲೂ ಹೆಚ್ಚಾಗಿ ಸ್ಟೀಲ್ (ಕಬ್ಬಿಣ) ತಯಾರಿಸುವ ಕಾರ್ಖಾನೆಗಳ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳು ತಯಾರಾಗುತ್ತಿದ್ದವು. ಕಾರ್ಖಾನೆಯು ತನ್ನ ಉತ್ತುಂಗ ಕಾಲದಲ್ಲಿ 20ರಿಂದ 30 ಟನ್ ಮ್ಯಾಂಗನೀಸ್ ವಸ್ತುಗಳನ್ನು ಉತ್ಪಾದಿಸುತ್ತಿತ್ತು. ವಸ್ತುಗಳ ಗ್ರೇಡ್​ಗಳ ಆಧಾರದ ಮೇಲೆ ದರ ನಿಗದಿಪಡಿಸಲಾಗುತಿತ್ತು.

ಗುಜರಾತದ ಶಾಹ ಅಲ್ಯಾಸ್, ಹರಿಯಾಣದ ಜಿಂದಾಲ್ ಸ್ಟೀಲ್, ಮುಂಬೈನ ಮುಕುಂದ ಸ್ಟೀಲ್, ಜಮ್ೆಡ್​ಪುರದ ಉಷಾ ಮಾರ್ಟಿನ್, ಚೆನ್ನೈನ ಎಸ್ಸಾರ್ ಸ್ಟೀಲ್, ಕೋಲ್ಕತದ ಆದ್ವಾನಿ ಸ್ಟೀಲ್, ರಾಜ್ಯದ ಹೊಸಪೇಟೆ, ಸೊಂಡೂರ, ವಿಜಯನಗರದ ಸ್ಟೀಲ್ ಕಾರ್ಖಾನೆಗಳಿಗೆ ಇಲ್ಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಜೊತೆಗೆ ಕೇಂದ್ರ ಸರ್ಕಾರದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್​ನ (ಎಸ್​ಎಐಎಲ್) ಘಟಕಗಳಿಗೂ ರವಾನಿಸಲಾಗುತ್ತಿತ್ತು. ಅಲ್ಲದೆ, ಈಜಿಪ್ತ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಗೂ ರಫ್ತು ಮಾಡಲಾಗುತ್ತಿತ್ತು. ಈಗ ಕಾರ್ಖಾನೆ ಬಂದ್ ಆಗಿದೆ. ಆದರೂ ಕಾರ್ಖಾನೆಯ ಆವರಣದಲ್ಲಿ ಶೇಖರಿಸಿರುವ ಹಳೆಯ ಉಪ ಉತ್ಪನ್ನವನ್ನು ಮಾರಿ ಕಾರ್ಖಾನೆಯನ್ನು ಜೀವಂತವಾಗಿಡಲು ಆಡಳಿತ ಮಂಡಳಿಯವರು ಪ್ರಯತ್ನಿಸುತ್ತಿದ್ದಾರೆ. ಈ ಕಾರ್ಖಾನೆ ಪುನಶ್ಚೇತನಗೊಂಡು ಗತವೈಭವ ಮರಳಲಿ ಎಂಬುದು ದಾಂಡೇಲಿ ಜನರ ಅಭಿಲಾಷೆಯಾಗಿದೆ.

ಬುಲೆಟ್​ಗೆ ಬಳಕೆ
ಈ ಕಾರ್ಖಾನೆಯಲ್ಲಿ ತಯಾರಿಸಿದ ಮ್ಯಾಂಗನೀಸ್ ಅದಿರನ್ನು ಉಕ್ಕಿನ ಶಕ್ತಿಯನ್ನು (ಗಟ್ಟಿತನವನ್ನು) ಹೆಚ್ಚಿಸಲು ಮತ್ತು ಉಕ್ಕನ್ನು ತುಕ್ಕು ಹಿಡಿಯುವಿಕೆಯಿಂದ ರಕ್ಷಿಸಲು ಉಕ್ಕಿನ ಕಾರ್ಖಾನೆಗಳಲ್ಲಿ ಬಳಸಲಾಗುತ್ತಿತ್ತು. ಇದಲ್ಲದೆ, ಅತಿ ಶ್ರೇಷ್ಠ ಗುಣಮಟ್ಟದ ಉತ್ಕೃಷ್ಟ ಸ್ಟೀಲ್ ಪದಾರ್ಥಗಳ ತಯಾರಿಕೆಗೆ (ಉದಾಹರಣೆಗೆ ಮಿಲ್ಕ್ ವ್ಯಾನ್​ಗೆ ಬಳಸಲಾಗುವ ಟ್ಯಾಂಕರ್​ನ ಸ್ಟೀಲ್), ರೈಲ್ವೆ ಗಾಲಿಗಳ ತಯಾರಿಕೆಗೆ ಮತ್ತು ದೇಶದ ರಕ್ಷಣಾ ಇಲಾಖೆಯ ಬುಲೆಟ್ ತಯಾರಿಕೆಗೆ ಇಲ್ಲಿನ ಮ್ಯಾಂಗನೀಸ್ ಉತ್ಪನ್ನ ಬಳಸಲಾಗುತ್ತಿತ್ತು. ಇದಲ್ಲದೆ, ಬ್ಯಾಟರಿಗೆ ಬಳಸಲಾಗುವ ಸ್ಟೀಲ್ ಮತ್ತು ವೆಲ್ಡಿಂಗ್ ರಾಡ್​ಗಳ ತಯಾರಿಕೆಗೂ ಉಪಯೋಗಿಸಲಾಗುತ್ತಿತ್ತು.

ಕಾರ್ಖಾನೆ ಸಾವಿರಾರು ಕುಟಂಬಗಳ ಜೀವನಾಡಿಯಾಗಿತ್ತು, ದಾಂಡೇಲಿಗೆ ಉದ್ಯೋಗದ ದೃಷ್ಟಿಯಿಂದ ಕಾರ್ಖಾನೆಯ ಅವಶ್ಯಕತೆ ಇದೆ. ಒಟ್ಟಿನಲ್ಲಿ ಜನರ ಅನಕೂಲತೆಗಾಗಿ ಸರ್ಕಾರವಾಗಲಿ, ಆಡಳಿತ ಮಂಡಳಿಯಾಗಲಿ ಅಥವಾ ಬೇರೊಂದು ಆಡಳಿತ ಮಂಡಳಿಯಾಗಲಿ ಮುಂದೆ ಬಂದು ನಗರದ ಈ ಕಾರ್ಖಾನೆಯನ್ನು ಪುನಾರಂಭಿಸಬೇಕು. ಅಶೋಕ ಚೌಗಲೆ ಅಧ್ಯಕ್ಷರು, ದಾಂಡೇಲಿ ಎಂಪ್ಲಾಯೀಸ್ ಯೂನಿಯನ್ (ಡಿಎಸ್​ಎಫ್​ಎ), ದಾಂಡೇಲಿ