ಮೂಡಿಗೆರೆ: ಭಾರತೀಯ ಸಂವಿಧಾನದ ಜನಪರ ಉದ್ದೇಶಗಳನ್ನು ಹಾಗೂ ಅದರ ಮೌಲ್ಯವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಬಿ.ಹೊಸಳ್ಳಿ ಗ್ರಾಮ ಪಂಚಾಯಿತಿಯಿಂದ ಗುರುವಾರ ನಡೆದ ಸಮಾನತೆಯ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಎಲ್ಲರಿಗೂ ಶ್ರೀರಕ್ಷೆ ನೀಡುತ್ತದೆ. ಸಾಮಾನ್ಯ ವ್ಯಕ್ತಿ ಕೂಡ ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಸಿಕೊಟ್ಟಿದೆ. ಮೌಢ್ಯವನ್ನು ದೂರ ಇಡುವಂತೆ ಸಲಹೆ ನೀಡಿದೆ. ಪ್ರತಿಯೊಬ್ಬರಲ್ಲೂ ಭ್ರಾತೃತ್ವ, ಸಮಾನತೆ, ಸಹಬಾಳ್ವೆಯ ಗುಣ ಹೊಂದಲು ಪ್ರೇರಣೆ ನೀಡಿದೆ. ಸಮಾನತೆಯ ಕಾರ್ಯಕ್ರಮ ಪ್ರತಿ ಹಳ್ಳಿಯಲ್ಲಿ ನಡೆಯಬೇಕಾಗಿದೆ. ಹಾಗಾದರೆ ಮಾತ್ರ ಸಂವಿಧಾನದ ಉದ್ದೇಶ ಈಡೇರಲಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಹಣ, ಆಸ್ತಿ, ಅಂತಸ್ತು ಸೇರಿದಂತೆ ಪ್ರತಿಯೊಂದಕ್ಕೂ ನಡೆಸುವ ಕಿತ್ತಾಟದ ನಡುವೆ ಸಮಾಜದಲ್ಲಿ ಸಮಾನತೆಯ ಬಹುದೊಡ್ಡ ಆಶಯವನ್ನು ಸಂವಿಧಾನ ಪ್ರತಿಯೊಬ್ಬರಿಗೂ ಕಲಿಸಿಕೊಟ್ಟಿದೆ. ಅಂಥ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಆಗಾಗ ಹೇಳಿಕೆ ನೀಡುತ್ತಿರುವುದು ದೇಶದ್ರೋಹದ ಕೆಲಸ. ದೇಶ ಇರುವ ತನಕ ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಚಾಲ್ತಿಯಲ್ಲಿರಲಿದೆ. ಅದನ್ನು ಬದಲಾವಣೆ ಮಾಡಲು ಹೊರಟವರಿಗೆ ದೇಶದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಬಿ.ಹೊಸಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಎಂ.ಆಶ್ರಿತ್ ಮಾತನಾಡಿ, ಗ್ರಾಮೀಣ ಭಾಗದ ಜನ ಸಂವಿಧಾನವನ್ನು ತಿಳಿದುಕೊಂಡು ಅದರ ನೆರಳಿನಲ್ಲಿ ಬದುಕು ಕಟ್ಟಿಕೊಂಡರೆ ಮಾತ್ರ ಸಂವಿಧಾನದ ಆಶಯ ಮತ್ತು ಉದ್ದೇಶ ಈಡೇರಲಿದೆ. ಗ್ರಾಪಂನಲ್ಲಿ ಅಧಿಕಾರ ಹಿಡಿದು ಆಡಳಿತ ನಡೆಸಲು ಮತ್ತು ಅಭಿವೃದ್ಧಿ ಕಾರ್ಯಕೈಗೊಳ್ಳಲು ಸಂವಿಧಾನ ದಾರಿ ದೀಪವಾಗಿದೆ. ಸಮಾನತೆಯ ಪಾಠ ಬೋಧಿಸುವ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.
ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಭಾರತೀಯ ಸಂವಿಧಾನ ಮತ್ತು ಅದರ ಆಶಯದ ಕುರಿತು ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ನಾಟ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್, ಅಂಗಡಿ ಚಂದ್ರು, ಕೆ.ಮಂಚೇಗೌಡ, ಜಯಮ್ಮ, ಬಾಲಕೃಷ್ಣ ಇತರರಿದ್ದರು.