ತುಮಕೂರು: ಪ್ರಸ್ತುತ ಮತದಾರರು ವೈಯಕ್ತಿಕ ಲಾಭದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮತ ಚಲಾಯಿಸಲಾರಂಭಿಸಿದ್ದಾರೆ, ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಸ್ವಾರ್ಥ, ಜಾತಿಯನ್ನು ಉನ್ನತಿಕರಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರಿಸಿದರು.
ತುಮಕೂರು ವಿವಿಯಲ್ಲಿ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಂಘ, ತುಮಕೂರು ವಿವಿ ರಾಜ್ಯಶಾಸ್ತ್ರ ಶಿಕ್ಷಕರ ಅಕಾಡೆಮಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ 20ನೇ ರಾಜ್ಯಶಾಸ್ತ್ರ ಶಿಕ್ಷಕರ ರಾಜ್ಯ ಸಮ್ಮೇಳನದ ಎರಡನೆಯ ದಿನ ಮಂಗಳವಾರ "ವರ್ತಮಾನದ ರಾಜಕೀಯವು ಪ್ರಜಾಪ್ರಭುತ್ವಕ್ಕೆ ಅನುಕೂಲಕರವೇ?' ವಿಷಯದ ಕುರಿತ ವಿಶೇಷ ಗೋಷ್ಠಿಯಲ್ಲಿ ಮಾತನಾಡಿದರು.
ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸರಿದಾರಿಯಲ್ಲಿಯೇ ಇದೆ, ಸಂವಿಧಾನಕ್ಕೆ ಪೂರಕವಾಗಿಯೇ ಕಾರ್ಯಕಲಾಪ ನಡೆಯುತ್ತಿದೆ. ಚುನಾವಣಾ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಆಗಿರಬಹುದು, ಎಲ್ಲ ವ್ಯವಸ್ಥೆಗಳು ಕಲುಷಿತವಾಗುವುದು ಸಾಮಾನ್ಯ. ಆದರೆ, ಸಂವಿಧಾನದಲ್ಲಿ ನೀಡಿರುವ ಪ್ರಶ್ನಿಸುವ ಅಧಿಕಾರ ದೇಶದ ಎಲ್ಲೆಡೆಯೂ ಇದೆ ಎಂದರು. ನಾಯಕರನ್ನು ಅಧಿಕಾರವು ಸಾಕಷ್ಟು ಕಾರಣದಿಂದ ಜನರಿಂದ ದೂರವಾಗಿಸುತ್ತಿದೆ. ನಮ್ಮನ್ನು ನಂಬಿಕೊಂಡಿದ್ದ ಜನರನ್ನು ಭ್ರಮನಿರಸನಗೊಳಿಸುತ್ತದೆ. ಎಷ್ಟೆಲ್ಲ ನ್ಯೂನತೆಗಳಿದ್ದರೂ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿದೆ, ಭಾರತದ ಭೌಗೋಳಿಕ ಇತಿಹಾಸದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಷ್ಟೇ ಹೊಂದಿಕೊಳ್ಳಲು ಸಾಧ್ಯ, ಪ್ರಪಂಚಕ್ಕೆ ಮಾರ್ಗದರ್ಶನ ನೀಡುವ ಶಕ್ತಿ ಭಾರತದ ಪ್ರಜಾಪ್ರಭುತ್ವಕ್ಕಿದೆ ಎಂದರು.
ಪ್ರಜಾಪ್ರಭುತ್ವ ಎಲ್ಲ ಕಾಲದಲ್ಲಿಯೂ ಗೆದ್ದಿದೆ. ಇತ್ತೀಚಿನ ಸಂಸತ್ ಚುನಾವಣೆಯಲ್ಲಿಯೂ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಜನರು ಉತ್ತರ ನೀಡಿದ್ದು ಎಲ್ಲರಿಗೂ ಪಾಠ. ನಾವು ನಿರೀಕ್ಷೆ ಮಾಡಿದ್ದೇ ಬೇರೆ. ಆದರೆ ಎಲ್ಲರೂ ಪ್ರಶ್ನಾತಿತರು ಎಂಬುದನ್ನು ಫಲಿತಾಂಶದಲ್ಲಿ ತೋರಿಸಿದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ ಎಂದರು. ಮಾಜಿ ಸಂಸದ ಆಯನೂರು ಮಂಜುನಾಥ ಮಾತನಾಡಿ, ವಿದ್ಯಾವಂತ ನೌಕರರು, ಪ್ರಜ್ಞಾವಂತ ಸಮಾಜ ಚುನಾವಣೆಯಲ್ಲಿ ಮತದಾನ ಮಾಡಲು "ಪ್ಯಾಕೇಜ್' ಬಯಸುತ್ತಿರುವುದು ದುರದೃಷ್ಟಕರ. ಇದನ್ನು ವಿದ್ಯಾವಂತರ ಉನ್ನತ ಮಟ್ಟದ ಭ್ರಷ್ಟಾಚಾರವೆಂದು ಕರೆಯಬಹುದು. ವಿದ್ಯಾವಂತ ಸಮೂಹ ಪ್ರಜಾಪ್ರಭುತ್ವದ ಸೌಂದರ್ಯವನ್ನು ಕುರೂಪಗೊಳಿಸಿದೆ. ಹಣವೇ ಅಂತಿಮವಾಗಿರುವ ಸಮಯದಲ್ಲಿ ಅವಕಾಶ ಸಿಕ್ಕರೆ ಎಲ್ಲರೂ ಭ್ರಷ್ಟಾಚಾರಿಗಳಾಗೋಣ ಎಂಬ ಮನಸ್ಥಿತಿಯಿದೆ ಎಂದರು.
ಶಾಸಕ ಹಾಗೂ ಸಂಸದನಾಗಲು 25ರಿಂದ 100 ಕೋಟಿ ಹಣ ಖರ್ಚು ಮಾಡಬೇಕಾದ ದುಸ್ಥಿತಿ ಉಂಟಾಗಿದೆ. ಜಾತಿ, ಕುಟುಂಬ ರಾಜಕಾರಣ, ಹಣ, ತೋಳ್ಬಲದಿಂದ ಭ್ರಷ್ಟಾಚಾರದ ಬೇರು ಬಲವಾಗುತ್ತಿದೆ. ಮತದಾನ ಮಾಡದವರೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹಿಗಳು ಎಂದರು. ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ದೇಶದ 543 ಸಂಸದರಲ್ಲಿ 251 ಮಂದಿಯ ವಿರುದ್ಧ ವಿವಿಧ ಕ್ರಿಮಿನಲ್ ಮೊಕದ್ದಮೆಗಳಿವೆ. ಇವರಲ್ಲಿ 159 ಮಂದಿಯ ವಿರುದ್ಧ ಅತ್ಯಾಚಾರ, ಅಸಭ್ಯವರ್ತನೆ, ಕಳ್ಳತನ, ಕೊಲೆ, ಅಪಹರಣದಂತಹ ಆರೋಪಗಳಿವೆ. 2014ರಿಂದ ಇಲ್ಲಿಯವರೆಗೂ ಸಂಸದರ ಮೇಲಿರುವ ಅಪರಾಧಗಳ ತೀವ್ರತೆ ಹೆಚ್ಚಾಗುತ್ತಲೆ ಇದೆ. ಮುಂದೊಂದು ದಿನ ಕ್ರಿಮಿನಲ್ ಆರೋಪಗಳಿರುವ 543 ಸಂಸದರನ್ನೂ ಆಯ್ಕೆ ಮಾಡಿ ಕಳುಹಿಸುವ ಪರಿಸ್ಥಿತಿ ಉಂಟಾದರೂ ಆಶ್ಚರ್ಯವಿಲ್ಲ ಎಂದರು.
ಮೈಸೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮುಜಾಫರ್ ಅಸಾದಿ ಮಾತನಾಡಿ, ಬಸವಣ್ಣನವರ ಅನುಭವ ಮಂಟಪವೇ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ ಮೊದಲ ಮನೆ. ಆದರೆ, ಪ್ರಜಾಪ್ರಭುತ್ವಕ್ಕೆ ಪರ್ಯಾಯವಾಗಿ ಹಿಂದುತ್ವವನ್ನು ಪರಿಚಯಿಸುತ್ತಿದ್ದೇವೆ. ಧಾರ್ಮಿಕ ನೆಲೆಯಲ್ಲಿ ನ್ಯಾಯ, ಕಾನೂನು, ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಚುನಾವಣೆ ಪ್ರಜಾಪ್ರಭುತ್ವದ ಭಾಗವಷ್ಟೇ ಎಂದು ಎಲ್ಲರೂ ತಿಳಿಯಬೇಕು ಎಂದರು. ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಜಯಪ್ರಕಾಶ ಮಾವಿನಕುಳಿ, ತುಮಕೂರು ವಿವಿ ರಾಜ್ಯಶಾಸ್ತ್ರ ಶಿಕ್ಷಕರ ಅಕಾಡೆಮಿಯ ಅಧ್ಯಕ್ಷ ಡಾ.ಟಿ.ಜಿ.ನಾಗಭೂಷಣ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಸಮ್ಮೇಳನದ ಅಧ್ಯಕ್ಷ ಪ್ರೊ.ಜಿ.ಬಸವರಾಜ, ಸಂಘಟನಾ ಕಾರ್ಯದರ್ಶಿ ಡಾ.ಎಂ.ಎಸ್.ನಾಗರಾಜು, ಡಾ.ಕೆ.ಸಿ.ಸುರೇಶ, ಕೋಶಾಧಿಕಾರಿ ಡಾ.ಆರ್.ಮಂಜುನಾಥ್ ಇದ್ದರು.
ರಾಜಕೀಯ ಸಾಕ್ಷರತೆ ಇಲ್ಲದವನೇ ಅನಕ್ಷರಸ್ಥ: ಇಂದಿಗೂ ಕಾಳಜಿ, ಅಸ್ಮಿತೆಯ, ಬಹುತ್ವ ಹಾಗೂ ಸಂಯುಕ್ತ ರಾಜಕಾರಣದ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಊಳಿಗಮಾನ್ಯ ಪದ್ಧತಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವುದು ದುರ್ದೈವದ ಸಂಗತಿ ಎಂದು ಸಮ್ಮೇಳನದ ಸಮಾರೋಪ ಮಾತುಗಳನ್ನಾಡಿದ ಪ್ರೊ.ಬರಗೂರು ರಾಮಚಂದ್ರಪ್ಪ ಬೇಸರಿಸಿದರು. ದೇಶದ ಹಿತಚಿಂತನೆ ಪಕ್ಷದಿಂದ ನಾಯಕರ ಹಿತಚಿಂತನೆಗೆ ಇಳಿದಿದೆ. ವ್ಯಕ್ತಿಗತ ರಾಜಕಾರಣ ಎಂದಿಗೂ ಅಸಮಾನತೆ ತೋರಿಸುತ್ತದೆ. ಸರ್ಕಾರ, ದುರಾಡಳಿತ ಟೀಕಿಸಿದರೆ ದೇಶವನ್ನು ಟೀಕಿಸಿದಂತೆ ಎಂದು ದೇಶ ವಿರೋಧಿ ಚಟುವಟಿಕೆಯ ಕಾನೂನಿನ ಅಡಿಯಲ್ಲಿ ಬಂಧಿಸುತ್ತಾರೆ. ನಾಯಕತ್ವ ಏಕತ್ವವಾಗಿ ಸರ್ವಾಧಿಕಾರ ತಲೆದೋರಿದೆ. ಬಹುತ್ವದ ನಾಯಕತ್ವ ಅಗತ್ಯವಾಗಿದೆ. ನಾಯಕನಲ್ಲಿ ಬಹುತ್ವ ಜೀವಿಸಬೇಕು ಎಂದರು. ಸಿಎಂ, ಪಿಎಂ ಮುಖ ಪ್ರಕಟಿಸಿ ಚುನಾವಣೆ ಎದುರಿಸುತ್ತಿರುವುದು ಸಂಸದೀಯ ಪ್ರಜಾಪ್ರಭುತ್ವವೇ? ಈ ನಡೆ ಶಾಸಕರ ಮತ್ತು ಸಂಸದರ ಹಕ್ಕಿಗೆ ಚ್ಯುತಿ ತಂದಂತೆ. ಇದನ್ನು ಪ್ರಜೆಗಳು ಹಾಗೂ ಮಾಧ್ಯಮದವರು ಪ್ರಶ್ನಿಸುತ್ತಿಲ್ಲವೇಕೆ? ವ್ಯಕ್ತಿ ಪೂಜೆಯಲ್ಲಿ ನಿರತರಾಗಿರುವ ಪ್ರಜೆಗಳಿಗೆ ಉಳಿಗಾಲವಿಲ್ಲ ಎಂದು ತಿಳಿಸಿದರು. ರಾಜಕೀಯ ಸಾಕ್ಷರತೆ ಇಲ್ಲದವನೇ ನಿಜವಾದ ಅನಕ್ಷರಸ್ಥ. ಪಂಚೇದ್ರಿಯಗಳು ಮಲಿನವಾಗಿರುವ ಸಂದರ್ಭದಲ್ಲಿ ಅಸ್ಪ-----ೃಶ್ಯತೆಯು
ತಾಂಡವವಾಡುತ್ತಿದೆ ಎಂದರು.