ಜಿಲ್ಲೆ

ದೇಶದ ಏಕತೆಗೆ ನಾಯಕತ್ವ ಶಿಬಿರ ಬಹುಮುಖ್ಯ

ಚಾಮರಾಜನಗರ: ಭಾರತ ಸೇವಾದಳದ ಸಂಘಟನೆಗೆ ಹೆಚ್ಚು ಒತ್ತು ಕೊಡುವ ತೆಗೆ ಜಿಲ್ಲಾ ಮಟ್ಟದಲ್ಲಿ ಮಕ್ಕಳ ನಾಯಕತ್ವ ಶಿಬಿರಗಳನ್ನು ಹೆಚ್ಚೆಚ್ಚು ಆಯೋಜನೆ ಮಾಡಬೇಕು ಎಂದು ಜಿಲ್ಲಾಧ್ಯಕ್ಷ ಬಿ.ವಿ.ವೆಂಕಟಪ್ಪ ನಾಗಪ್ಪಶೆಟ್ಟಿ ತಿಳಿಸಿದರು.

ನಗರದ ಭಾರತ ಸೇವಾದಳದ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಭಾರತ ಸೇವಾದಳದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಮಕ್ಕಳ ಪುನಶ್ಚೇತನ ಶಿಬಿರ, ರಾಷ್ಟ್ರ ಧ್ವಜದ ಬಗ್ಗೆ ಮಾಹಿತಿ, ಶಿಸ್ತು, ಸಂಯಮ ಮತ್ತು ದೇಶದ ಏಕತೆಗಾಗಿ ನಾಯಕತ್ವದ ಶಿಬಿರಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳಬೇಕು ಎಂದರು.

ನಮ್ಮ ಭಾರತ ಸೇವಾದಳದ ಜಿಲ್ಲಾ ಸಮಿತಿಯಲ್ಲಿ ಎಲ್ಲ ರಾಷ್ಟ್ರೀಯ ಮಹನೀಯರ ಜಯಂತಿಗಳನ್ನು ಆಚರಿಸಿಕೊಂಡು ಬರುತ್ತಿರುವುದು ಸಂತೋಷದ ವಿಷಯ. ನಮ್ಮ ಜಿಲ್ಲಾ ಸಮಿತಿಗೆ ಕೇಂದ್ರ ಸಮಿತಿಯಿಂದ ಹೆಚ್ಚಿನ ಪ್ರೋತ್ಸಾಹ ನೀಡುವುದರ ಮೂಲಕ ಸಹಕಾರ ನೀಡಬೇಕು ಎಂದರು. ಈ ವೇಳೆ ನಿವೃತ್ತರಾದ ಶಿಕ್ಷಕ ಜೋಸೆಫ್ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಎಸ್.ನಾಗರಾಜು, ಮಹೇಶ್ ಜಿ.ಬಳಿಗಾರ್, ಕಾರ್ಯದರ್ಶಿ ವಿ.ಮಹದೇವಯ್ಯ, ಕೋಶಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್, ಕೇಂದ್ರ ಸಮಿತಿಯ ಸದಸ್ಯ ಎಂ.ಬಿ.ಲಿಂಗರಾಜು, ಸಂಘಟನಾ ಕಾರ್ಯದರ್ಶಿ ಎನ್.ಜೋಸೆಫ್, ಜಿಲ್ಲಾ ಸಮಿತಿ ಸದಸ್ಯ ಷಡಕ್ಷರಿಸ್ವಾಮಿ, ವೆಂಕಟೇಶ್ ನಾಯಕ್, ಜಿಲ್ಲಾ ಸಂಘಟಕ ಈ.ಅರುಣ್ ಹಾಜರಿದ್ದರು.