ಚಿತ್ರದುರ್ಗ: ವಿಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಇದೆ ಎಂದಾದರೆ ಅದಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕೊಡುಗೆ ಕಾರಣ ಎಂದು ಕಾಂಗ್ರೆಸ್ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಅನಂತ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಜೀವ್‌ಗಾಂಧಿ ಅವರ 33 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಪಂಚಾಯತ್‌ರಾಜ್ ವ್ಯವಸ್ಥೆಗೆ ಶಕ್ತಿ ತುಂಬುವ ಮೂಲಕ ರಾಜೀವ್‌ಗಾಂಧಿ ಜನರಿಗೆ ಅಧಿಕಾರ ಹಂಚಿಕೆ ಮಾಡಿದರು. ಅತಿ ಕಡಿಮೆ ವಯಸ್ಸಿನಲ್ಲೇ ಪ್ರಧಾನ ಮಂತ್ರಿಯಾಗಿ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದರು.
ಮತದಾನದ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸುವ ಮೂಲಕ ಹೆಚ್ಚಿನ ಯುವಜನರಿಗೆ ಮತದಾನ ಹಕ್ಕು ಒದಗಿಸಿಕೊಟ್ಟರು. ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿದ್ದರಿಂದ ಅಭಿವೃದ್ಧಿಗೆ ವೇಗ ದೊರೆಯಿತು. ರಾಜೀವ್ ಅವರ ಕೊಡುಗೆಗಳನ್ನು ಯುವಜನರಿಗೆ ತಿಳಿಸುವ ಕೆಲಸವಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಅಧ್ಯಕ್ಷ ತಾಜ್‌ಪೀರ್ ಮಾತನಾಡಿ, ಗಾಂಧೀಜಿ ಅವರ ಕನಸಾಗಿದ್ದ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ರಾಜೀವ್ ನನಸು ಮಾಡಿದ್ದಾರೆ ಎಂದರು.
ಮುಖಂಡರಾದ ಡಿ.ಎನ್. ಮೈಲಾರಪ್ಪ, ಶಿವಣ್ಣ, ಸಂಪತ್‌ಕುಮಾರ್, ಎನ್.ಡಿ. ಕುಮಾರ್, ಲೋಕೇಶ್, ಮುದಸಿರ್, ರವಿಕುಮಾರ್, ಶಬ್ಬೀರ್, ವಾಸಿಂ, ಪ್ರಕಾಶ್‌ರಾಮ ನಾಯ್ಕ, ಅಂಜಿನಪ್ಪ, ಲಕ್ಷ್ಮೀಕಾಂತ್, ಅಬ್ದುಲ್ ಇತರರಿದ್ದರು.