ಜಿಲ್ಲೆ

ದೇಶಕ್ಕೆ ಸೈನಿಕರ ಕೊಡುಗೆ ಅನನ್ಯ

ಚಿತ್ರದುರ್ಗ: ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸೈನಿಕರ ಕೊಡುಗೆ ಅನನ್ಯವಾದುದು ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಹೇಳಿದರು.

ಜಿಲ್ಲಾಡಳಿತ, ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಲ್ಲಿ ಧ್ವಜ ಬಿಡುಗಡೆಗೊಳಿಸಿ ಮಾತನಾಡಿದರು.

ನಮ್ಮ ವೀರ ಯೋಧರಿಗೆ ಕೃತಜ್ಞತೆ ಸಲ್ಲಿಸಿ, ಪ್ರೋತ್ಸಾಹಿಸಲು ಹಾಗೂ ಅವರ ಕುಟುಂಬಗಳಿಗೆ ಬೆಂಬಲ ಒದಗಿಸಲು ಸಶಸ್ತ್ರ ಪಡೆಗಳ ಧ್ವಜ ನಿಧಿಗೆ ಉದಾರ ಕಾಣಿಕೆ ನೀಡುವ ಈ ಕಾರ್ಯಕ್ರಮ ಅತ್ಯುತ್ತಮ ವೇದಿಕೆಯಾಗಿದೆ ಎಂದರು.

ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ಮಾತನಾಡಿ, ಚಿತ್ರದುರ್ಗದ ಡಿಸಿ ಅವರು ಮುತುವರ್ಜಿ ವಹಿಸಿ ಮಾಜಿ ಸೈನಿಕರ ಶ್ರೇಯೋಭಿವೃದ್ಧಿ, ಕಲ್ಯಾಣಕ್ಕಾಗಿ ನಿಗದಿತ ಗುರಿಗಿಂತ ಹೆಚ್ಚಿನ ನಿಧಿ ಸಂಗ್ರಹಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿವೇಶನ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.

ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಜಿಲ್ಲೆಯ 35 ಮಂದಿ ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಕಾರ್ಯಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ವೀರಸೌಧವನ್ನು ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಡಿಸಿ ಭರವಸೆ ನೀಡಿದರು.

ಇಲಾಖೆಯ ವಿ.ನಾರಾಯಣಮೂರ್ತಿ, ಜಿ.ಆರ್.ಬಾಲು, ಸಂಘದ ಸದಸ್ಯರಾದ ಜೈರುದ್ಧೀನ್, ವೆಂಕಟೇಶ ರೆಡ್ಡಿ, ಹನುಮಂತರೆಡ್ಡಿ, ವೃಷಭೇಂದ್ರಪ್ಪ, ಸೂರಯ್ಯ ಸೇರಿ ಜಿಲ್ಲೆಯ ಮಾಜಿ ಸೈನಿಕರಿದ್ದರು.