ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ವಿಶ್ವವೇ ಮೆಚ್ಚುವ ಸಂವಿಧಾನ ಬರೆದಿದ್ದು, ಇದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿ ಉನ್ನತಸ್ಥಾನಮಾನಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಚಾಮರಾಜನಗರ ಹಾಲುಒಕ್ಕೂಟದ ಅಧ್ಯಕ್ಷ ವೈ.ಸಿ.ನಾಗೇಂದ್ರ ಅಭಿಪ್ರಾಯಪಟ್ಟರು.
ತಾಲೂಕಿನ ಕುದೇರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜನಹಿತಾಶಕ್ತಿ ಹೋರಾಟ ವೇದಿಕೆ, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನಡೆದ ಸಂವಿಧಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಅಭಿವೃದ್ದಿಗೆ ಪೂರಕವಾದ ಸುಭದ್ರ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ರಚನೆಮಾಡಿದ್ದಾರೆ. ಶಾಲಾಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಲ್ಲೇ ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಅಧ್ಯಯನ ಮಾಡಬೇಕು. ನಾವೆಲ್ಲರೂ ಉನ್ನತಮಟ್ಟದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ ಎಂದರೆ ಅದಕ್ಕೆ ಸಂವಿಧಾನ ಕಾರಣ ಎಂದರು.
ಸಾಹಿತಿ ಕೃಷ್ಣಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಪ್ರಪಂಚದ 60 ದೇಶಗಳಿಗೆ ಭೇಟಿ ಅಲ್ಲಿಯ ಸಂವಿಧಾನ ಓದಿಕೊಂಡು, ವಿವಿಧ ಭಾಷೆ, ಧರ್ಮ, ಜಾತಿಮತಗಳಿರುವ ಭಾರತದೇಶದ ಮುಂದಿನ ಹಲವಾರು ವರ್ಷಗಳ ಗುರಿಇಟ್ಟುಕೊಂಡು, ಸಂವಿಧಾನ ರಚನೆ ಮಾಡಿದ್ದಾರೆ.
ಇದರಿಂದ ಸಮಾಜದ ಎಲ್ಲ ವರ್ಗದವರು ಸಂವಿಧಾನಾತ್ಮಕಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕುದೇರು ಪೋಲಿಸ್ ಠಾಣೆ ಉಪನಿರೀಕ್ಷಕಿ ಎಸ್.ಕುಮುದಾ, ಜನಹಿತಾಶಕ್ತಿ ಹೋರಾಟವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ಸಿಕ್ರಮ್‌ಸಂಸ್ಥಯ ಜಿಲ್ಲಾಧ್ಯಕ್ಷ ಕೆ.ಸಿ.ರೇವಣ್ಣ, ಪ್ರಾಂಶುಪಾಲ ಥಿಯೋಡರ್ ಲೂಥಸ್, ಸಿದ್ದಾರ್ಥ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಿ.ರಂಗಸ್ವಾಮಿ, ಉಮ್ಮತ್ತೂರು ಸೋಮಣ್ಣ ಹಾಜರಿದ್ದರು.