ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಕಾಂಗ್ರೆಸ್ನಿಂದ ಆಯೋಜಿಸಿದ್ದ ಪಾದಯಾತ್ರೆಗೆ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. ಶಾಸಕ ಎಂ.ವೈ.ಪಾಟೀಲ್, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣಪ್ಪ ಕಮಕನೂರ, ಚನ್ನಾರೆಡ್ಡಿ ತುನ್ನೂರ, ಬಿ.ಆರ್.ಪಾಟೀಲ್ ಇತರರಿದ್ದರು. 
ಜಿಲ್ಲೆ

ದೇಶಕ್ಕೆ ಭಾರತೀಯ ಜನತಾ ಪಕ್ಷ ಮಾರಕ

ಸೇಡಂ (ಕಲಬುರಗಿ) : ಜನರ ಸಮಸ್ಯೆ ಆಲಿಸಿ, ಸ್ಪಂದಿಸಬೇಕಾದ ಸರ್ಕಾರ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ, ಕೋಮುವಾದ ಸೃಷ್ಟಿಸಲು ಹೊರಟಿದೆ. ಬಿಜೆಪಿ ಸಕರ್ಾರದಿಂದಾಗಿ ರಾಜ್ಯದ ಶಾಂತಿ ಸರ್ವನಾಶವಾಗಿದ್ದು, ಎಲ್ಲೆಡೆ ಕೊಲೆ- ಸುಲಿಗೆ ಹೆಚ್ಚೆಚ್ಚು ನಡೆಯುತ್ತಿವೆ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ದೂರಿದರು.

ಯಾನಾಗುಂದಿ ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಕಾಂಗ್ರೆಸ್​ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಯಾನಾಗುಂದಿಯಿಂದ-ಸುಲೇಪೇಟವರೆಗೆ ಜನಜಾಗೃತಿ ಪಾದಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ, ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಅದಾನಿ, ಅಂಬಾನಿ ಸೇರಿ ಇನ್ನಿತರ ಬಂಡವಾಳ ಶಾಹಿಗಳಿಗೆ ಬಿಜೆಪಿ ಲಾಭ ಮಾಡಿಕೊಡುತ್ತಿದೆ. ದೇಶಕ್ಕೆ ಮಾರಕವಾದ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿದೆ ಎಂದು ಕಿಡಿಕಾರಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ದೇಶಕ್ಕಾಗಿ ಕಾಂಗ್ರೆಸ್ನ ಸಾಕಷ್ಟು ನಾಯಕರು ತಮ್ಮ ಪ್ರಾಣ ಅರ್ಪಣೆ ಮಾಡಿದ್ದಾರೆ. ಆದರೆ ಆರ್​ಎಸ್​ಎಸ್ ಹಾಗೂ ಬಿಜೆಪಿಯಿಂದ ಯಾರೊಬ್ಬರೂ ಸ್ವಾತಂತ್ರೃಕ್ಕಾಗಿ ಹೋರಾಡಿಲ್ಲ. ಮುಸ್ಲಿಮರು ಭಯೋತ್ಪಾದಕರನ್ನು ಹುಟ್ಟು ಹಾಕುತ್ತಾರೆ ಎಂದು ಬೊಬ್ಬೆ ಹೊಡೆಯುವ ಹಿಂದು ಸಂಘಟಕರು, ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಏಕೆ ಪೂಜಿಸ್ತಾರೆ ? ಇದನ್ನು ಹಿಂದು ಭಯೋತ್ಪಾದನೆ ಅನ್ನಬೇಕೇ ? ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಜನವಿರೋಧಿ ಬಿಜೆಪಿ ಆಡಳಿತವನ್ನು ಕೊನೆಗೊಳಿಸುವುದು ಅಗತ್ಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು. ಸಮ ಸಮಾಜದ ನಿರ್ಮಾಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಾಗಿದೆ ಎಂದರು.

ಶಾಸಕ ಎಂ.ವೈ.ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಚನ್ನಾರಡ್ಡಿ ತುನ್ನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಮುಖಂಡರಾದ ಮುಕ್ರಂಖಾನ್, ಮಹಾಂತಪ್ಪ ಸಂಗಾವಿ, ಸತೀಶರೆಡ್ಡಿ ರಂಜೋಳ ಮಾತನಾಡಿದರು.

ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಮುಧೋಳ ಬ್ಲಾಕ್ ಅಧ್ಯಕ್ಷ ರವೀಂದ್ರ ನಂದಿಗಾಮ, ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಜೈಭೀಮ ಊಡಗಿ, ಪ್ರಮುಖರಾದ ಮಲ್ಲಿಕಾರ್ಜುನ ಭಂಕೂರ, ಭೀಮಾಶಂಕರ ಕೊಳ್ಳಿ, ಶರಣಪ್ಪ ಮಾನೇಗಾರ, ಮಹಿಪಾಲರೆಡ್ಡಿ ಗುರುಮಠಕಲ್, ಶಂಭುರೆಡ್ಡಿ ಮದ್ನಿ, ರಾಜಗೋಪಾಲರೆಡ್ಡಿ, ವಿಶ್ವನಾಥ ಪಾಟೀಲ್, ಸಿದ್ದರಾಮ ಪ್ಯಾಟಿ, ಪ್ರಭಾವತಿ ಪಾಟೀಲ್, ಬಸಮ್ಮ ಪಾಟೀಲ್, ಭೀಮರಾವ ಅಳ್ಳೊಳ್ಳಿ, ರವಿ ಸಾಹುಕಾರ, ರಾಜುಗೌಡ ಬೆನಕನಹಳ್ಳಿ, ಜಗನ್ನಾಥ ಚಿಂತಪಳ್ಳಿ, ಅಬ್ದುಲ್ ಗಫೂರ್ ಇತರರಿದ್ದರು.

ಶ್ರೀನಿವಾಸರೆಡ್ಡಿ ಶಕಲಾಸಪಲ್ಲಿ ಸ್ವಾಗತಿಸಿದರು. ಸಿದ್ದು ಬಾನರ್ ನಿರೂಪಣೆ ಮಾಡಿದರು. ವೆಂಕಟರೆಡ್ಡಿ ಯಾನಾಗುಂದಿ ವಂದಿಸಿದರು.

ಭೀಮಸೇನ ದೇವರಿಗೆ ವಿಶೇಷ ಪೂಜೆ: ಕಾಂಗ್ರೆಸ್​ನಿಂದ ಆಯೋಜಿಸಿದ್ದ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಟೆಂಪಲ್ ರನ್ ನಡೆಸಿದರು. ದಂಪತಿ ಸಮೇತ ಮೋತಕಪಲ್ಲಿಯ ಶ್ರೀ ಬಲಭೀಮಸೇನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಯಾನಾಗುಂದಿಯ ಶ್ರೀ ಮಾತೆ ಮಾಣಿಕೇಶ್ವರಿ ಅಮ್ಮನವರ ಗದ್ದುಗೆಗೆ ನಮನ ಸಲ್ಲಿಸಿ, ಆಶೀರ್ವಾದ ಪಡೆದರು.


ಬಿಜೆಪಿ ನಾಯಕರಿಗೆ ಕೆಲಸ ಮಾಡುವುದು ಗೊತ್ತಿಲ್ಲ, ಕೇವಲ ಮಾತನಾಡಿ ಜನರನ್ನು ಮರಳು ಮಾಡುವುದನ್ನು ಕಲಿತಿದ್ದಾರೆ. ದೇಶದ ಸ್ವಾತಂತ್ರೃ ಹೋರಾಟದಲ್ಲಿ ಶೂನ್ಯ ಕೊಡುಗೆ ನೀಡಿದ ಬಿಜೆಪಿಯಿಂದ ದೇಶಾಭಿಮಾನದ ಪಾಠ ಕಲಿಯಬೇಕಿಲ್ಲ. ನಮ್ಮದು ಸ್ವಾತಂತ್ರೃಕ್ಕಾಗಿ ಹೋರಾಡಿದ ಹೆಮ್ಮೆಯ ಪಕ್ಷವಾಗಿದೆ.
| ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ

ರೈತರಿಗೆ ಬೀಜ- ರಸಗೊಬ್ಬರ ಪೂರೈಕೆ ಮಾಡಲು ಆಗುತ್ತಿಲ್ಲ. ಆಹಾರ ಸಾಮಗ್ರಿಗಳು, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲೆಂಡರ್ ದರ ಗಗನಕ್ಕೇರಿವೆ. ಆದರೂ ಜನಪರ ಆಡಳಿತ ಎಂದು ಕರೆದುಕೊಳ್ಳುವ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಸೇಡಂನಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ, ಭ್ರಷ್ಟಚಾರ ತಾಂಡವವಾಡುತ್ತಿದೆ.
| ಡಾ.ಶರಣಪ್ರಕಾಶ ಪಾಟೀಲ್, ಮಾಜಿ ಸಚಿವ