ಹಾಸನ: ಜ್ಞಾನ ಸಂಜೀವಿನಿಯನ್ನು ಹೊಂದಿದ್ದ ಶ್ರೀ ಶಂಕರರು ಒಂದೆಡೆಗೆ ಮಾತ್ರ ಸೀಮಿತವಾಗದೆ ದೇಶದ ಉದ್ದಲಕ್ಕೂ ಸಂಚರಿಸಿ ಎಲ್ಲಾ ವರ್ಗದವರಿಗೂ ಧಾರ್ಮಿಕ ದಿಕ್ಸೂಚಿ ತೋರಿಸಿಕೊಟ್ಟರು ಎಂದು ತುಮಕೂರಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತಿ ಸಾಮೀಜಿ ನುಡಿದರು.
ನಗರದ ಶ್ರೀ ಸೀತಾರಾಂಜನೇಯ ದೇವಾಲಯದ ಸಭಾಂಗಣದಲ್ಲಿ ಶನಿವಾರ ಮನೆ ಮನೆಯಲ್ಲಿ ಶ್ರೀಶಂಕರ ಪ್ರತಿಷ್ಠಾನದ 8ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಶಂಕರರು ಹಾಗೂ ಮಾನವ ಅಭ್ಯುದಯ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಸ್ವಾಮೀಜಿ, ಜಗತ್ತನ್ನು ಬೆಳಗಿದಂತಹ ಶಂಕರಾಚಾರ್ಯರು ಇತಿಹಾಸ ಪುಟದ ಎಂದಿಗೂ ಅಜರಾಮರ. ಶಂಕರರ ಜ್ಞಾನವನ್ನು ಸ್ವಾಮಿ ವಿವೇಕಾನಂದರು ತಿಳಿದುಕೊಂಡು ಮುಂದಕ್ಕೆ ಕೊಂಡೂಯ್ದರು. ಭಾರತೀಯ ಧಾರ್ಮಿಕ ಆಧ್ಯಾತ್ಮಿಕ ಪರಂಪರೆಯಲ್ಲಿ ಇಬ್ಬರೂ ಕೂಡ ಉತ್ತಮ ಸಂದೇಶವನ್ನು ಸಾರಿದವರು. ವಿವೇಕಾನಂದರ ಹೆಸರು ಸನ್ಯಾಸಿ ಎಂಬ ಪದಕ್ಕೆ ಪರ್ಯಾಯವಾಗಿದೆ. ಯಾವುದೇ ಜಾತಿ, ಪರಂಪರೆ, ತತ್ವದ ಅನುಯಾಯಿ ಕೂಡ ಸನ್ಯಾಸಿ ಎಂದ ತಕ್ಷಣ ವಿವೇಕಾನಂದರ ಎಂದು ಭಾವಿಸುತ್ತಾರೆ. ಅದಕ್ಕೆ ಕಾರಣ ವಿವೇಕಾನಂದ ಅವರ ಶ್ರೇಷ್ಠ ಮಟ್ಟದ ಧ್ಯಾನ ಎಂದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಮಾತನಾಡಿ, ಶಂಕರಾಚಾರ್ಯರ ತತ್ವ ಸಿದ್ಧಾಂತಗಳು, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಮುಂತಾದವರೆಲ್ಲರೂ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದ್ದಾರೆ. ಇಂದಿನ ಯುವ ಪೀಳಿಗೆಯು ದೇಶಿ ಸಂಸ್ಕೃತಿಯ ಸೊಗಸನ್ನು ಅರಿಯದೇ ಪಾಶ್ಚಾತ್ಯ ಸಂಸ್ಕೃತಿಗೆ ತಲೆದೂಗುತ್ತಿರುವುದು ಬೇಸರದ ಸಂಗತಿ. ಇಂತಹ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚು ನಡೆಯಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮನೆ ಮನೆಯಲ್ಲಿ ಶ್ರೀ ಶಂಕರ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್. ಬಾಲಸುಬ್ರಹ್ಮಣ್ಯ ಪ್ರಸಾದ್, ಟ್ರಸ್ಟಿಗಳಾದ ಕೆಪಿಎಸ್ ಪ್ರಮೋದ್, ನಿಟ್ಟೂರು ಜಯರಾಂ, ಮಂಜುನಾಥ್ ಮೂರ್ತಿ, ಕಾರ್ಯದರ್ಶಿ ಗುರುಮೂರ್ತಿ, ರಂಜಿನಿ ಮಂಜುನಾಥ್, ಡಾ. ನಾರಾಯಣ ಪ್ರಕಾಶ್, ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಕಾರ್ಯದರ್ಶಿ ಗುರುಮೂರ್ತಿ, ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಬೇಲೂರು ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಗುರುಪ್ರಸಾದ್, ರಘುನಂದನ್ ಇತರರು ಉಪಸ್ಥಿತರಿದ್ದರು.